Home Kannada ಮಂಡ್ಯ: ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ

ಮಂಡ್ಯ: ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ಆತ್ಮಹತ್ಯೆ

by Eha

ಮಂಡ್ಯ: ಹಿರಿಯ ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಪೌರ ಕಾರ್ಮಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಡ್ಯ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣ ಪುರಸಭೆಯ ನೌಕರ ನಾರಾಯಣ್ (33) ಆತ್ಮಹತ್ಯೆಗೆ ಶರಣಾಗಿದ್ದಾನೆ. ಈತ ಕಳೆದ 12 ವರ್ಷದಿಂದ ಮದ್ದೂರು ನಗರದಲ್ಲಿ ಪೌರಕಾರ್ಮಿಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಹಿರಿಯ ಅಧಿಕಾರಿಗಳ ಕಿರುಕುಳದಿಂದ ಮನನೊಂದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್ ನೋಟ್ ಬರೆದಿಟ್ಟಿದ್ದಾನೆ. ಕೆಲದಿನಗಳ ಹಿಂದೆ ಪೌರಕಾರ್ಮಿಕ ನಾರಯಣ ಅವರನ್ನು ಮದ್ದೂರು ಪುರಸಭೆಯ ಮುಖ್ಯಾಧಿಕಾರಿ ಮುರುಗೇಶ್. ಆರೋಗ್ಯ ನಿರೀಕ್ಷಕ ಝಾಸಿಂಖಾನ್.ಪುರಸಭೆ ಅಧ್ಯಕ್ಷ ಸುರೇಶ್ ಕುಮಾರ್ ಬಲವಂತವಾಗಿ ಮ್ಯಾನ್ ಹೋಲ್ ಗಿಳಿಸಿ ಬರಿಗೈಯ್ಯಲ್ಲಿ ಮಲ ಸ್ವಚ್ಚಗೊಳಿಸಿದ್ದರು ಎನ್ನಲಾಗಿದೆ.

ಈ ಸಂಬಂದ ಹೊರಗುತ್ತಿಗೆ ವಾಹನ ಚಾಲಕರ ಸಂಘಟನೆ ಪ್ರತಿಭಟನೆ ನಡೆಸಿ ಪ್ರಕರಣವನ್ನು ಪೌರಾಡಳಿತ ನಿರ್ದೇಶನಾಲಯ ಹಾಗೂ ಸಫಾಯಿ ಕರ್ಮಚಾರಿ ಆಯೋಗದ ಗಮನಕ್ಕೆ ತಂದಿತ್ತು. ಇದರಿಂದ ಕೆರಳಿದ ಅಧಿಕಾರಿಗಳು ನಾರಾಯಣ್ ರನ್ನು ಬೆದರಿಸಿ ತಾನೇ ಸ್ವಯಂ ಆಗಿ ಮ್ಯಾನ್ ಹೋಲ್ ಗೆ ಇಳಿದಿದ್ದಾಗಿ ಹೇಳಿಕೆ ನೀಡುವಂತೆ ಬೆದರಿಸಿದ್ದರು ಎಂದು ಹೇಳಲಾಗಿದೆ. ಈ ಪ್ರಕರಣದ ನಂತರ  ಅಧಿಕಾರಿಗಳು ನಾರಾಯಣ್ ಅವರಿಗೆ ಕೆಲಸ ನೀಡದೆ ಕಿರುಕುಳ ನೀಡಲು ಪ್ರಾರಂಭಿಸಿದರು. ಅವರ ಸಂಬಳವನ್ನು 28,000 ರೂ.ಗಳಿಂದ 6,000 ರೂ.ಗೆ ಇಳಿಸಲಾಯಿತು ಎಂದು ಹೇಳಲಾಗುತ್ತಿದೆ. ಅಧಿಕಾರಿಗಳ ಕಿರುಕುಳಕ್ಕೆ ಅಂಜಿದ ಪೌರಕಾರ್ಮಿಕ ನಾರಯಣ್ ತನ್ನ ಸಾವಿಗೆ ಮುಖ್ಯಾಧಿಕಾರಿ ಮುರುಗೇಶ್. ಆರೋಗ್ಯ ನಿರೀಕ್ಷಕ ಝಾಸಿಂಖಾನ್ ಹಾಗು ಇತರರು ಕಾರಣರೆಂದು ಪತ್ರ ಬರೆದು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಮೃತ ದೇಹವನ್ನು ಮಂಡ್ಯ ಮಿಮ್ಸ್ ಗೆ ರವಾನಿಸಿದ್ದಾರೆ.

Related Posts

Leave a Comment