ಮದನಪಲ್ಲೆ(ಆಂಧ್ರ ಪ್ರದೇಶ): ಮೂಢನಂಬಿಕೆ ಹೆಸರಿನಲ್ಲಿ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಹತ್ಯೆ ಮಾಡಿದ್ದ ದಂಪತಿಯನ್ನು ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಬಂಧಿಸಲಾಗಿದೆ.ದಂಪತಿಯನ್ನು ಮದನಪಲ್ಲೆ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮದನಪಲ್ಲೆ ನಗರದ ಹೊರವಲಯದಲ್ಲಿರುವ ಶಿವ ನಗರದ ಶಿರಡಿ ಸಾಯಿಬಾಬಾ ಅಪಾರ್ಟ್ ಮೆಂಟ್ ನಿವಾಸಿಗಳಾದ ಪದ್ಮಜಾ ಮತ್ತು ಪುರುಷೋತ್ತಮ್ ನಾಯ್ಡು ಎಂಬ ದಂಪತಿಗಳು ಕಲಿಯುಗ ಅಂತ್ಯವಾಗಿ ಸತ್ಯಯುಗ ಆರಂಭವಾಗುತ್ತದೆ, ಆಗ ತಮ್ಮ ಇಬ್ಬರು ಇಬ್ಬರು ಹೆಣ್ಣು ಮಕ್ಕಳು ಪುನರ್ಜನ್ಮ ಪಡೆದು ಬರುತ್ತಾರೆ ಎಂದು ದೈವ ಸಂದೇಶ ಬಂದಿದೆ ಎಂದು ಹೇಳಿ ತಮ್ಮಿಬ್ಬರು ಹೆಣ್ಣುಮಕ್ಕಳನ್ನು ಬಲಿಪಡೆದಿದ್ದರು.ಇಲ್ಲಿ ವಿಚಿತ್ರ ಸಂಗತಿಯೆಂದರೆ ಈ ದಂಪತಿ ವಿದ್ಯಾವಂತರು. ಪದ್ಮಜಾ ಖಾಸಗಿ ಶಾಲೆಯಲ್ಲಿ ಉಪಪ್ರಾಂಶುಪಾಲೆಯಾಗಿದ್ದರೆ, ಪುರುಷೋತ್ತಮ್ ಸರ್ಕಾರಿ ಶಾಲೆಯೊಂದರಲ್ಲಿ ಉಪ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದರು.ಇವರ ಹಿರಿಯ ಮಗಳು ಅಲೈಕ್ಯ (27) ಭೋಪಾಲ್ ನಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದರು. ಕಿರಿಯ ಪುತ್ರಿ ಸಾಯಿ ದಿವ್ಯಾ (22) ಬಿಬಿಎ ಮಾಡಿದ್ದಲ್ಲದೆ ಮುಂಬೈನ ಎಆರ್ ರಹಮಾನ್ ಮ್ಯೂಸಿಕ್ ಶಾಲೆಯ ವಿದ್ಯಾರ್ಥಿಯಾಗಿದ್ದರು. ಈಕೆ ಕೋವಿಡ್ ಲಾಕ್ ಡೌನ್ ನಂತರ ಮನೆಗೆ ಮರಳಿದ್ದರು.