Home Kannada ಓದಿದ್ದು ಡೈರಿ ಡಿಪ್ಲೋಮಾ, ಮಾಡಿದ್ದು ಎಮ್ಮೆ ಕಳ್ಳತನ… ಖತರ್ನಾಕ್ ಕಳ್ಳರ ಬಂಧನ

ಓದಿದ್ದು ಡೈರಿ ಡಿಪ್ಲೋಮಾ, ಮಾಡಿದ್ದು ಎಮ್ಮೆ ಕಳ್ಳತನ… ಖತರ್ನಾಕ್ ಕಳ್ಳರ ಬಂಧನ

by Eha

ಬೆಳಗಾವಿ: ದನಕರುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, 10 ದನಕರುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ತಾಲೂಕಿನ ಹಂಗರಗಾ ಗ್ರಾಮದ ಸುರೇಶ ಪಾಟೀಲ್​ (32), ಗಣೇಶ ನಾಯಕ್ (27) ಬಂಧಿತ ಆರೋಪಿಗಳು. ಬೆಳಗಾವಿ ಗ್ರಾಮೀಣ ಪ್ರದೇಶಗಳಲ್ಲಿ ಆಕಳು, ಎಮ್ಮೆಗಳನ್ನು ಕಳ್ಳತನ ಮಾಡುತ್ತಿರುವ ಕುರಿತು‌ ಮಾಹಿತಿ ಬಂದ ಬಳಿಕ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು, ಇಬ್ಬರು ಖದೀಮರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಸುರೇಶ್ ಪಾಟೀಲ್ ಎಂಬಾತ ಡೈರಿ ಡಿಪ್ಲೋಮಾ ಶಿಕ್ಷಣದ ಜೊತೆಗೆ ಹೈನುಗಾರಿಕೆ ಉದ್ಯಮದ ಬಗ್ಗೆ ಟ್ರೈನಿಂಗ್ ಪಡೆದುಕೊಂಡಿದ್ದಾನೆ. ಕಳ್ಳತನ ಮಾಡಿದ ಎಮ್ಮೆ ಹಾಗೂ ಆಕಳುಗಳನ್ನು ತಮ್ಮದೇ ಫಾರ್ಮ್ ಹೌಸ್‍ನಲ್ಲಿಟ್ಟು ಹೈನುಗಾರಿಕೆ ಮಾಡುವ ಮೂಲಕ‌ ಲಾಭ ಗಳಿಸುತ್ತಿದ್ದರು ಎಂಬ ಮಾಹಿತಿ ಪ್ರಾಥಮಿಕ ವಿಚಾರಣೆ ವೇಳೆ ಗೊತ್ತಾಗಿದೆ.

ಪ್ರಕರಣದ ಕುರಿತು ಮಾಹಿತಿ ನೀಡಿದ ಡಿಸಿಪಿ ಡಾ. ವಿಕ್ರಮ ಆಮ್ಟೆ, ಬೆಳಗಾವಿ ಗ್ರಾಮೀಣ ಠಾಣೆಯ ಇನ್ಸ್​ಪೆಕ್ಟರ್ ಸುನೀಲ್​ ಕುಮಾರ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ದನಕರುಗಳನ್ನು ಕಳ್ಳತನ ಮಾಡುತ್ತಿದ್ದ ಇಬ್ಬರನ್ನು ವಶಕ್ಕೆ ಪಡೆದುಕೊಂಡು, ಒಟ್ಟು 5 ಜಾನುವಾರು ಕಳ್ಳತನ ಪ್ರಕರಣಗಳನ್ನು ಭೇದಿಸಿದ್ದಾರೆ. ‌ಬಂಧಿತರ ಪೈಕಿ ಆರೋಪಿ ಸುರೇಶ ಪಾಟೀಲ ಎಂಬಾತ ಡೈರಿ ಡಿಪ್ಲೋಮಾ ಶಿಕ್ಷಣದ‌ ಜೊತೆಗೆ ಹೈನುಗಾರಿಕೆಯಲ್ಲೂ ಶಿಕ್ಷಣ ಪಡೆದುಕೊಂಡಿದ್ದಾನೆ. ಬಂಧಿತರಿಂದ 10 ದನಕರುಗಳನ್ನು ವಶಕ್ಕೆ ಪಡೆದುಕೊಂಡಿದ್ದು, 5 ಆಕಳು, 5 ಎಮ್ಮೆ ಇದ್ದು, ಇದರಲ್ಲಿ 2 ಗೀರ್ ತಳಿಯ ಆಕಳು, 3 ಮುರ್ರಾ ತಳಿಯ ಎಮ್ಮೆಗಳು ಸೇರಿವೆ. ವಾಹನ ಸೇರಿ ಒಟ್ಟು 9 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Related Posts

Leave a Comment