Home Kannada ‘ಕಾವಲಿ ಗ್ಯಾಂಗ್’ನ ಖದೀಮನ ಬಂಧನ​… 24 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

‘ಕಾವಲಿ ಗ್ಯಾಂಗ್’ನ ಖದೀಮನ ಬಂಧನ​… 24 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ

by Eha

ಬೆಂಗಳೂರು: ಜನರಗಮನ ಬೇರೆಡೆ ಸೆಳೆದು ಕಳ್ಳತನ ಮಾಡುವ ಪ್ರವೃತ್ತಿ ಬೆಳೆಸಿಕೊಂಡು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಕಾವಲಿ ಗ್ಯಾಂಗ್​ನ ಸದಸ್ಯನೋರ್ವನನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಆಂಧ್ರ ಪ್ರದೇಶದ ನೆಲ್ಲೂರಿನ ಕಪ್ಪರಾಲಾ ತಿಪ್ಪಾ ಗ್ರಾಮದ ಚೆಲ್ಲಾ ಪ್ರಭುದಾಸ್ (27) ಬಂಧಿತ ಆರೋಪಿ. ಈತನಿಂದ 24 ಲಕ್ಷ ರೂ. ಮೌಲ್ಯದ 440 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಮೂರು ಬೈಕ್​ಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ‌. ಕಾವಲಿ ಗ್ಯಾಂಗ್ ಲೀಡರ್ ಪ್ರತೀಷ್ ಹಾಗೂ ಈತನ ಸಹಚರರಾದ ಚೆಲ್ಲಾ ಅಲೆಕ್ಸಾಂಡರ್, ಗೋಗುಲ ನಾನಿ ಸೇರಿದಂತೆ ಏಳು ಮಂದಿ ಆರೋಪಿಗಳು ತಲೆಮರೆಸಿಕೊಂಡಿದ್ದು, ಇವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದ್ದಾರೆ.

ಚಿನ್ನದ ವ್ಯಾಪಾರಿ ಶಿವರಾಂ ಎಂಬುವರು ಹೋಲ್ ಸೇಲ್ ಅಂಗಡಿಗಳಲ್ಲಿ ವಿವಿಧ ಡಿಸೈನ್​ನ ಹಲವು ಉಂಗುರ, ಕಿವಿಯೋಲೆ, ಜುಮುಕಿ ಸೇರಿದಂತೆ ವಿವಿಧ ಆಭರಣಗಳನ್ನು ಖರೀದಿಸಿ ನಗರದ ವಿವಿಧ ಗಿರವಿ ಅಂಗಡಿಗಳಲ್ಲಿ ಮಾರಾಟ ಮಾಡುವ ಕೆಲಸ ಮಾಡುತ್ತಾರೆ‌‌. ಕಳೆದ ಫೆ. 19ರಂದು ಶಿವರಾಂ ತಮ್ಮ ಸುಜುಕಿ ಬೈಕ್​ನಲ್ಲಿ ವಿವಿಧ ಅಂಗಡಿಗಳಲ್ಲಿ ಚಿನ್ನಾಭರಣ ತೋರಿಸಿಕೊಂಡು ಬೆಳ್ಳಳ್ಳಿ ಕ್ರಾಸ್​ನಿಂದ ಹೆಗಡೆ ನಗರದ ಪ್ಲೈ ಓವರ್ ಬಳಿ ಬೈಕ್ ನಿಲ್ಲಿಸಿ ಮೂತ್ರ ವಿಸರ್ಜನೆ ಮಾಡಿ ಬರುವಷ್ಟರಲ್ಲಿ ಬೈಕ್​​ನಲ್ಲಿ ಇಟ್ಟಿದ್ದ ಸುಮಾರು 1200 ಗ್ರಾಂ ಚಿನ್ನಾಭರಣ ಕಳ್ಳತನವಾಗಿತ್ತು‌‌.‌ ಈ ಸಂಬಂಧ ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಗೊಂಡ ಇನ್ಸ್​ಪೆಕ್ಟರ್ ಬಿ.ಮಲ್ಲಿಕಾರ್ಜುನ್, ಘಟನಾ ಸ್ಥಳಕ್ಕೆ ಹೋಗಿ ಕೆಲ ಮಾಹಿತಿ ಸಂಗ್ರಹಿಸಿದ್ದರು. ತನಿಖೆ ವೇಳೆ ಆಂಧ್ರ ಪ್ರದೇಶದ ನೆಲ್ಲೂರು ಗ್ಯಾಂಗ್​ನ ಕೈಚಳಕವಿದೆ ಎಂದು ಅರಿತು, ಆರೋಪಿಗಳ ಪತ್ತೆಗಾಗಿ ಘಟನೆ ನಡೆದ ಸ್ಥಳದಿಂದ 400 ಕಿಲೋ ಮೀಟರ್​ವರೆಗೂ ಬರುವ 70ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮರಾಗಳು ಮತ್ತು ಹೈವೆಗಳಲ್ಲಿ ಬರುವ ಒಟ್ಟು ಐದು ಟೋಲ್ ಗೇಟ್​ಗಳ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿದಾಗ ಆರೋಪಿಯ ಚಹರೆ ಪತ್ತೆ ಹಚ್ಚಿದ್ದರು.

ಚಿಂತಾಮಣಿ ರಸ್ತೆಯ ಹೆಚ್ ಕ್ರಾಸ್ ಬಳಿ ಬೈಕ್​ಗಳನ್ನು ತಂದು ಪಾರ್ಕ್ ಮಾಡಿ ಬೆಂಗಳೂರಿಗೆ ಬಂದು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಖತರ್ನಾಕ್​ ಖದೀಮನನ್ನು ಮಫ್ತಿಯಲ್ಲಿದ್ದ ಪೊಲೀಸರು ಹೆಚ್ ಕ್ರಾಸ್ ಬಳಿಯೇ ಬಂಧಿಸಿದ್ದಾರೆ. ಸೆರೆಯಾಗಿರುವ ಆರೋಪಿ ಈ ಹಿಂದೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಸಾಧ್ಯತೆಯಿದ್ದು, ಈ ಬಗ್ಗೆ ಸಂಪಿಗೆಹಳ್ಳಿ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ನೆಲ್ಲೂರು ಜಿಲ್ಲೆಯಲ್ಲಿ ಬರುವ ಕಾವಲಿ, ಕಪ್ಪರಾಲಾ ತಿಪ್ಪ ಗ್ರಾಮಗಳಲ್ಲಿ ವಾಸಿಸುವ ಬಹುತೇಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ. ಸುಲಭವಾಗಿ ಹಣ ಸಂಪಾದನೆಗಾಗೆ ಬೆಂಗಳೂರು, ಹೈದರಾಬಾದ್, ಚೈನ್ನೈ ಸೇರಿದಂತೆ ವಿವಿಧ ಕಡೆಗಳಲ್ಲಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುವ ಪ್ರವೃತ್ತಿ ಉಳ್ಳವರಾಗಿದ್ದಾರೆ‌. ಮಹಿಳೆಯರು ಕೃತ್ಯಕ್ಕೆ ಸಾಥ್ ನೀಡುತ್ತಾರೆ‌. ಸದ್ಯ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಕಾವಲಿ ಬಿಟ್ಟು ತಲೆಮರೆಸಿಕೊಂಡಿದ್ದಾರೆ.

Related Posts

Leave a Comment