Home Kannada ಗಂಡನನ್ನು ಕೊಲೆಗೈದು ಶೌಚಾಲಯದ ಗುಂಡಿಯಲ್ಲಿ ಮುಚ್ಚಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ

ಗಂಡನನ್ನು ಕೊಲೆಗೈದು ಶೌಚಾಲಯದ ಗುಂಡಿಯಲ್ಲಿ ಮುಚ್ಚಿದ್ದ ಪತ್ನಿಗೆ ಜೀವಾವಧಿ ಶಿಕ್ಷೆ

by Eha

ದಾವಣಗೆರೆ : ಮದ್ಯ ಸೇವಿಸಲು ಪತ್ನಿ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ ಪತಿಯನ್ನು ಕೊಲೆ‌ ಮಾಡಿ ಶೌಚಾಲಯದ ಗುಂಡಿಯಲ್ಲಿ ಹೂತು ಹಾಕಿದ್ದ ಪತ್ನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಅರುಂಡಿ ಗ್ರಾಮದ ವಾಸಿ ಶ್ರೀಮತಿ ರೇಣುಕಾ (29) ಶಿಕ್ಷೆಗೆ ಗುರಿಯಾದ ಆರೋಪಿ. ಬಂಗಿ ನರಸಿಂಹಪ್ಪ ಕೊಲೆಯಾದ ಪತಿ. ಇದು 2018ರಲ್ಲಿ ನಡೆದ ಘಟನೆಯಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಪತ್ನಿ ರೇಣುಕಾಳ ಮೇಲೆ ಆರೋಪ ಸಾಬೀತಾದ ಬೆನ್ನಲ್ಲೇ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಗೀತಾ ಅವರು ಜೀವಾವಧಿ ಶಿಕ್ಷೆ ಸಹಿತ 15 ಸಾವಿರ ದಂಡವನ್ನು ವಿಧಿಸಿ‌ ತೀರ್ಪು ನೀಡಿದ್ದಾರೆ. ಈ ಪ್ರಕರಣದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಎಸ್ ವಿ ಪಾಟೀಲ್ ಅವರು ವಾದ ಮಂಡಿಸಿದ್ದರು.

ಕೊಲೆಯಾದಬಂಗಿ ನರಸಿಂಹಪ್ಪ ಯಾವುದೇ ಕೆಲಸಕ್ಕೆ ಹೋಗದೆ ಪ್ರತಿ ದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಅದಲ್ಲದೆ ಪ್ರತಿ ದಿನ ಕುಡಿಯಲು ಹಣ ಕೊಡುವಂತೆ ತನ್ನ ಹೆಂಡತಿ ರೇಣುಕಾಳಿಗೆ ಪೀಡಿಸುತ್ತಿದ್ದನು. ಪತ್ನಿ ಹಣ ಕೊಡದೇ ಇದ್ದಲ್ಲಿ ಹೊಡಿದು-ಬಡಿದು ಚಿತ್ರಹಿಂಸೆ ನೀಡುತ್ತಿದ್ದನು. ಇದರಿಂದ ರೋಸಿ ಹೋದ ಪತ್ನಿ ರೇಣುಕಾ ತನ್ನ ಗಂಡನ ಹಿಂಸೆಯಿಂದ ಪಾರಾಗಲು ತನ್ನ ಗಂಡನನ್ನು ಕೊಲೆ ಮಾಡಲು ನಿರ್ಧರಿಸಿದ್ದಳು. ಮತ್ತೆ ತನ್ನ ಗಂಡ ಪಾನಮತ್ತನಾಗಿ ಮನೆಗೆ ಬಂದು ಕುಡಿಯಲು ಹಣ ಕೊಡುವಂತೆ ಪೀಡಿಸಿದ್ದಾನೆ. ಇದರಿಂದ‌ ಆಕ್ರೋಶಿತಳಾದ ರೇಣುಕಾ ಶೌಚಾಲಯದ ಕೋಣೆಯೊಳಗೆ ಎಳೆದುಕೊಂಡು ಹೋಗಿ ಕಬ್ಬಿಣದ ಕುಡುಗೋಲಿನಿಂದ ಕುತ್ತಿಗೆಯನ್ನು ಕೊಯ್ದು ಸಾಯಿಸಿದ್ದಾಳೆ. ಅಲ್ಲದೇ ತಾನು ಕೊಲೆ ಮಾಡಿರುವುದು ಯಾರಿಗೂ ತಿಳಿಯಬಾರದೆಂದು ಹೆಣವನ್ನು ಅಲ್ಲೇ ಪಕ್ಕದಲ್ಲಿರುವ ಶೌಚಾಲಯದ ಗುಂಡಿಯೊಳಗೆ ಹಾಕಿದ್ದಳು. ಈ ಸದರಿ ಪ್ರಕರಣವು ನ್ಯಾಮತಿ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಂಡು ತನಿಖೆ ಮಾಡಿ ಆರೋಪಿ ರೇಣುಕಾ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರಿಂದ‌ ಇಂದು ತೀರ್ಪು ಹೊರ ಬಿದ್ದಿದೆ.

Related Posts

Leave a Comment