Home Kannada ಗುಟ್ಕಾ ಸಾಲ ಕೊಡದ್ದಕ್ಕೆ ಪಾನ್ ಶಾಪ್ ಮಾಲೀಕನನ್ನೇ ಕೊಂದ

ಗುಟ್ಕಾ ಸಾಲ ಕೊಡದ್ದಕ್ಕೆ ಪಾನ್ ಶಾಪ್ ಮಾಲೀಕನನ್ನೇ ಕೊಂದ

by akash

ಬೆಳಗಾವಿ: ಗುಟ್ಕಾ ಸಾಲ ಕೊಡಲಿಲ್ಲ ಎಂಬ ಕಾರಣಕ್ಕೆ ಪಾನ್ ಶಾಪ್ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಘಟನೆಯಿಂದ ಕುಂದಾನಗರಿ ಜನ ಬೆಚ್ಚಿಬಿದ್ದಿದ್ದಾರೆ. ಮಂಗಳವಾರ ರಾತ್ರಿ ಬೆಳಗಾವಿಯ ವಡಗಾವಿ ಪ್ರದೇಶದ ಲಕ್ಷ್ಮೀ ನಗರದಲ್ಲಿ ಗಣೇಶ ವಿಸರ್ಜನೆ ಕಾರ್ಯಕ್ರಮ ಜೋರಾಗಿತ್ತು. ಜನರು ಗಣೇಶನ ವಿಸರ್ಜನೆಯಲ್ಲಿಯೇ ತಲ್ಲೀನರಾಗಿದ್ದರು. ಆದರೆ ಇತ್ತ ಆರೋಪಿ ದತ್ತಾತ್ರೇಯ ಶಿವಾನಂದ ಜತ್ತಿನಮಠ ಗುಟ್ಕಾ ಸಾಲ ಕೊಡು ಎಂದು ಬಂದಿದ್ದು, ಉದ್ರಿ ಕೊಡುವುದಿಲ್ಲ ಎಂದು ಪಾನ್ ಶಾಪ್ ಮಾಲೀಕ ಬಾಲಕೃಷ್ಣ ಶೆಟ್ಟಿ ಹೇಳಿದ್ದಾರೆ. ಇಷ್ಟು ಅಂದಿದ್ದೇ ತಡ ಪಾನ್ ಅಂಗಡಿ ಮಾಲೀಕನನ್ನು ದತ್ತಾತ್ರೇಯ ಶಿವಾನಂದ ಜತ್ತಿನಮಠ ಹತ್ಯೆ ಮಾಡಿದ್ದಾನೆ. ಹತ್ಯೆಯಾದ ಬಾಲಕೃಷ್ಣ ಶೆಟ್ಟಿ ಮೂಲತಃ ಉಡುಪಿ ಜಿಲ್ಲೆಯ ಕುಂದಾಪುರದವರು. ಕಳೆದ 25 ವರ್ಷಗಳಿಂದ ಪಾನ್ ಶಾಪ್ ನಡೆಸುತ್ತಿದ್ದರು. ಬೆಳಗ್ಗೆಯಿಂದ ರಾತ್ರಿವರೆಗೂ ಪಾನ್ ಶಾಪ್ ನಡೆಸಿಕೊಂಡು ಪತ್ನಿ, ಮಕ್ಕಳನ್ನು ಸಾಕುತ್ತಿದ್ದರು. ಘಟನೆ ಸಂಬಂಧ ಕೊಲೆಯಾದ ಬಾಲಕೃಷ್ಣ ಶೆಟ್ಟಿ ಆಪ್ತ ಪ್ರಭಾಕರ್ ಶೆಟ್ಟಿ ಮಾಧ್ಯಮಗಳ ಜೊತೆಗೆ ಮಾತನಾಡಿ, ಮಾದಕ ವಸ್ತು ಸೇವಿಸಿ ಬಂದು, ಗುಟ್ಕಾ ಸಾಲ ಕೊಡುವಂತೆ ಪದೇ ಪದೇ ಕಿರಿ ಕಿರಿ ಮಾಡುತ್ತಿದ್ದರು. ಉದ್ರಿ ಕೊಟ್ಟಿಲ್ಲ ಎಂಬ ಕಾರಣಕ್ಕೆ ಮನೆಗೆ ಹೋಗುತ್ತಿದ್ದ ಸಮಯದಲ್ಲಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾರೆ. ಆರೋಪಿ ದತ್ತಾತ್ರೇಯ ಶಿವಾನಂದ ಜತ್ತಿನಮಠ ನಮ್ಮ ಉಡುಪಿಯವರಿಗೆ ಸಾಕಷ್ಟು ತೊಂದರೆ ಕೊಡುತ್ತಿದ್ದ. ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ಯಾವುದೇ ಕಾರಣಕ್ಕೂ ಹೊರಗೆ ಬಿಡಬಾರದು, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.

Related Posts

Leave a Comment