ಅಕ್ರಮ ಗೋ ಸಾಗಣೆಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ಸಂಬಂಧ ತಮಗೆ ಪ್ರಾಣ ಬೆದರಿಕೆ ಕರೆಗಳು ಬರುತ್ತಿವೆ ಎಂದು ಭಜರಂಗಿ ಹಿಂದೂ ಪರಿಷತ್ ಸಂಸ್ಥಾಪಕ ಡಾ. ಗುರುಮೂರ್ತಿ ಗುರೂಜಿ ತಿಳಿಸಿದ್ಧಾರೆ.
ಆದ್ರೆ, ಯಾರ ಜೊತೆಗೂ ದ್ವೇಷ ಭಾವನೆ ಹೊಂದಿರಬಾರದು ಅನ್ನೋ ಕಾರಣಕ್ಕಾಗಿ ವೈಯಕ್ತಿಕವಾಗಿ ಯಾರ ವಿರುದ್ಧವೂ ದೂರು ನೀಡಿಲ್ಲ ಎಂದು ಗುರೂಜಿ ತಿಳಿಸಿದ್ದಾರೆ. ಈ ಕುರಿತಾಗಿ ಪ್ರಧಾನ ಮಂತ್ರಿಗಳಿಗೆ ಪತ್ರ ರವಾನಿಸಲಾಗಿದೆ. ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೂ ಮಾತನಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಗೋವಿನ ಪಾವಿತ್ರತೆ ಅರಿತು ಅದರ ಸಂರಕ್ಷಣೆಗೆ ಎಲ್ಲರೂ ಮುಂದಾಗಬೇಕೆಂದು ಕರೆ ನೀಡಿದ ಗುರುಮೂರ್ತಿ ಗುರೂಜಿ, ಅಕ್ರಮ ಗೋ ಸಾಗಣೆಯಲ್ಲಿ ಹಿಂದೂ ಧರ್ಮೀಯರೂ ತೊಡಗಿರುವುದು ನೋವಿನ ಸಂಗತಿಯಾಗಿದೆ ಎಂದರು. ಇಂತಹ ಚಟುವಟಿಕೆಗಳನ್ನು ನಿಲ್ಲಿಸಲು ಎಲ್ಲರೂ ಮುಂದಾಗಬೇಕೆಂದು ಅವರು ಮನವಿ ಮಾಡಿದರು.
ಭಜರಂಗಿ ಹಿಂದೂ ಪರಿಷತ್ನ ಘಟಕಗಳು ರಾಜ್ಯದ ಹಲವಾರು ಕಡೆಗಳಲ್ಲಿ ಪ್ರಾರಂಭವಾಗಿದ್ದು, ಎಲ್ಲೆಡೆಯೂ ಗೋ ಸಂರಕ್ಷಣೆಯ ಕಾರ್ಯವನ್ನು ಅಲ್ಲಿನ ಕಾರ್ಯಕರ್ತರ ಮೂಲಕ ಮಾಡಲಾಗುವುದು ಎಂದು ಗುರೂಜಿ ತಿಳಿಸಿದರು. ಈ ಸಂಬಂಧ ಕಾನೂನು ಹೋರಾಟಕ್ಕಾಗಿ ಅಲ್ಲಲ್ಲಿ ವಕೀಲರುಗಳನ್ನೂ ನೇಮಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಳೆಯ ಕರುಗಳನ್ನು ಮಾರಾಟ ಮಾಡುವುದರಿಂದ ನಮ್ಮ ರೈತರಿಗೆ ಸಿಗುವ ಹಣವನ್ನು ನಾವೇ ನೀಡುತ್ತಿದ್ದು, ಕರುಗಳನ್ನು ತಮಗೇ ನೀಡುವಂತೆಯೂ ಮನವೊಲಿಸಲಾಗುತ್ತಿದೆ ಎಂದು ಗುರೂಜಿ ತಿಳಿಸಿದರು.