Home Kannada ಜಾಗತಿಕ ಮಟ್ಟದ ಬಂಟರ ಒಕ್ಕೂಟವೊಂದು, ತನ್ನೂರಿಗಾಗಿ, ತನ್ನವರಿಗಾಗಿ ಮಿಡಿದಾಗ …

ಜಾಗತಿಕ ಮಟ್ಟದ ಬಂಟರ ಒಕ್ಕೂಟವೊಂದು, ತನ್ನೂರಿಗಾಗಿ, ತನ್ನವರಿಗಾಗಿ ಮಿಡಿದಾಗ …

by akash

ಮನೆಯಲ್ಲಿ, ಬೇರೆ ಬೇರೆ ರೀತಿಯ ದೈಹಿಕ ನ್ಯೂನತೆಗಳಿಂದ ತಾಯಿಯ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವ, ವಿಕಲಾಂಗಚೇತನರಾದ  ಮೂರು ಜನ ಮಕ್ಕಳು, ವಯಸ್ಸಾಗಿರುವ ತಾಯಿ, ದಿಕ್ಕು ದೆಸೆಯಿಲ್ಲದ ಆ ಕುಟುಂಬದ ಕಷ್ಟಕ್ಕೆ ಮರುಗಿ ಎಷ್ಟೋ ಜನ, ಸಂಘ ಸಂಸ್ಥೆಗಳು, ಆರ್ಥಿಕ ಸಹಾಯವನ್ನು ಕೂಡ ಮಾಡಿದ್ದರು. ಆದರೆ ಆ ಕುಟುಂಬದ ಪ್ರತೀ ತಿಂಗಳ ಖರ್ಚು ವೆಚ್ಚ ನೋಡುವಾಗ, ಪ್ರತೀ ದಿನವೂ ನಾಳೆ ಹೇಗೆ ಅನ್ನುವ ಚಿಂತೆ, ನಿತ್ಯ ನಿರಂತರವಾಗಿತ್ತು. ಅಂತಹ ಪರಿಸ್ಥಿತಿಯಲ್ಲಿ ಶಾಶ್ವತವಾದ ನೆರವಿನ ಹಸ್ತ ಚಾಚಿ , ಇಡೀ ಕುಟುಂಬವನ್ನೇ ದತ್ತು ಸ್ವೀಕಾರ ಮಾಡಿ ,ಪ್ರತೀ ತಿಂಗಳು, ತಿಂಗಳು, ಆ ಅಸಹಾಯಕ ಕುಟುಂಬಕ್ಕೆ ಹಣಕಾಸಿನ ನೆರವು ನೀಡುವ ಯೋಜನೆಯೊಂದಿಗೆ , ಆ ಕುಟುಂಬದ ಕಷ್ಟಕ್ಕೆ ತುರ್ತು ಸ್ಪಂದನೆ ನೀಡಿದ್ದಲ್ಲದೆ, ಅವರ ಆರ್ಥಿಕ ಸಮಸ್ಯೆಯ ಬಹುಪಾಲು ಹೊಣೆ ಹೊತ್ತು, ಅವರ ಜೀವನಕ್ಕೆ ಆಶಾಕಿರಣವಾದ ಸಂಸ್ಥೆ ಜಾಗತಿಕ ಬಂಟರ ಸಂಘಗಳ ಒಕ್ಕೂಟ…
ದತ್ತು ಸ್ವೀಕಾರ ಯೋಜನೆ ಎನ್ನುವ, ಭರವಸೆಯ ಹೊಂಗಿರಣ ಈ ದತ್ತು ಯೋಜನೆಯ ಪರಿಕಲ್ಪನೆಯೇ ನಿಜಕ್ಕೂ ಅತ್ಯದ್ಭುತವಾದದ್ದು. ಯಾವುದೇ ನೆರವು ಒಂದು ದಿನ ಅಥವಾ  ಒಂದಿಷ್ಟು ದಿನಗಳ ಮಾತಾಗದೇ ,ನಿರಂತರವಾಗಿದ್ದಾಗ, ಆರ್ಥಿಕವಾಗಿ ತೀರಾ ಕಷ್ಟದ ಪರಿಸ್ಥಿತಿಯಲ್ಲಿ ಇರುವ ಫಲಾನುಭವಿಗಳ ಜೀವನಮಟ್ಟದಲ್ಲಾಗುವ ಬದಲಾವಣೆ ,ಊಹೆಗೂ ನಿಲುಕದೆ ಇರುವಂತದ್ದು. ಇದೇ ದತ್ತು ಯೋಜನೆಯ ಮತ್ತೆ ಆರು ಜನ ಫಲಾನುಭವಿಗಳಲ್ಲಿ ಒಬ್ಬರು, ಅನಾರೋಗ್ಯ  ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದು ಸಂಪೂರ್ಣವಾಗಿ ಅವಲಂಬಿತರಾಗಿದ್ದರೆ,  ಇನ್ನೋರ್ವ ಯುವಕ ಅವಘಡವೊಂದರಿಂದಾಗಿ ದೈಹಿಕವಾಗಿ ಜರ್ಜರಿತಗೊಂಡು ಮೇಲೇಳುವ ಸಾಧ್ಯತೆಯನ್ನು ಕಳೆದುಕೊಂಡು ಕುಟುಂಬದವರ ಮೇಲೆ ಅವಲಂಬಿತವಾಗಿರಬೇಕಾದ ಪರಿಸ್ಥಿತಿ, ಹೀಗೆ ಆರ್ಥಿಕವಾಗಿ ಹಿಂದುಳಿದ ಒಟ್ಟು  ಆರು  ಕುಟುಂಬಗಳ ಕರುಣಾಜನಕ ಪರಿಸ್ಥಿತಿ ಕಂಡು, ಅವರನ್ನು ದತ್ತು ಸ್ವೀಕಾರ ಮಾಡುವುದರ ಮೂಲಕ, ಅವರ ಕುಟುಂಬದ ಬಹು ದೊಡ್ಡ ಭಾರವನ್ನು ಎಷ್ಟೋ ಮಟ್ಟಿಗೆ ಕಡಿಮೆ ಮಾಡಿದಂತಾಗಿದೆ. 
ಇನ್ನು ಏಳು ಜನ ವಿದ್ಯಾರ್ಥಿನಿಯರನ್ನು ದತ್ತು ಯೋಜನೆಯಡಿ ಸ್ವೀಕಾರ ಮಾಡಿರುವ ಜಾಗತಿಕ ಬಂಟರ ಸಂಘಗಳ ಒಕ್ಕೂಟ, ಅದೆಷ್ಟೋ ಜನ ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿನಿಯರ ಮನದಲ್ಲಿ ಉನ್ನತ ಶಿಕ್ಷಣ ಹಾಗೆ ಸಾಧನೆಯ ಕನಸನ್ನ ಹುಟ್ಟು ಹಾಕಿದೆ. ನೆರವು ಸಿಗೋದು ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ ಅಲ್ವಾ, ಇನ್ನೂ ಅದೆಷ್ಟೋ  ಜನ ಕಷ್ಟದಲ್ಲಿರೋರು ಇದ್ದಾರೆ.  ಅನ್ನುವ ಮಾತು ಬರೋದು ಸಹಜ ಆದರೆ ಇಲ್ಲಿ , ಫಲಾನುಭವಿಗಳು  ಮಾತ್ರ ಅಲ್ಲ, ಮುಂದೆ ತಮಗೂ ಈ ರೀತಿಯ ಸಹಾಯ ದೊರಕಬಹುದು, ನಾವೂ ಕೂಡ ಅದಕ್ಕಾಗಿ ಪ್ರಯತ್ನಿಸಿದರೆ, ನಮ್ಮ ಕನಸು ನನಸಾಗಬಹುದು ಅನ್ನುವ, ಒಂದಿಷ್ಟು ಸ್ಪೂರ್ತಿಯ ಕಿಡಿ ಹೊತ್ತಿಸಿ ಬಿಟ್ಟರೂ ಸಾಕು, ಇಂತಹ ದತ್ತು ಯೋಜನೆಯ ಪರಿಕಲ್ಪನೆ ಅದ್ಭುತವಾಗಿ ಸಾಕಾರಗೊಂಡಂತೆ. ನನಸಾದ  ಸ್ವಂತ ಮನೆ, ಮಗಳ ಮದುವೆಯ ಕನಸು
ದತ್ತು ಯೋಜನೆಗಳಷ್ಟೇ ಅಲ್ಲ .ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಅನ್ನೋ ಗಾದೆಯಂತೆ, ಈ ಎರಡೂ ಕಾರ್ಯಗಳು ಇವತ್ತಿಗೂ ಅದೆಷ್ಟೋ ಕೋಟಿ ಜನರಿಗೆ ಕನಸಿನ ಮಾತು, ಬಂಟ ಸಮುದಾಯದ ಅದೆಷ್ಟೋ ಅಶಕ್ತ ಕುಟುಂಬಗಳ, ಇನ್ನೂರಕ್ಕೂ ಹೆಣ್ಣು ಮಕ್ಕಳ ಮದುವೆಗೆ, ಆರ್ಥಿಕವಾಗಿ ಧನಸಹಾಯ ಮಾಡುವುದರ ಮೂಲಕ, ಎಷ್ಟೋ ಕುಟುಂಬಗಳ ಜೀವನದ ಬಹುದೊಡ್ಡ ಜವಾಬ್ದಾರಿಯ ಭಾರವನ್ನು, ಸ್ವಲ್ಪಮಟ್ಟಿಗೆ  ಹಗುರಗೊಳಿಸಿದಂತಾಗಿದೆ. ಇನ್ನು ಅದೆಷ್ಟೋ ವರ್ಷಗಳಿಂದ ಪುಟ್ಟ ಮನೆಯ ಕನಸು ಕಾಣುತ್ತಿದ್ದ ಸುಮಾರು ನೂರಾ ಐವತ್ತು ಕುಟುಂಬಗಳಿಗೆ, ಮನೆಯ ಮಂಜೂರಾತಿ ಆಗಿದ್ದು ಎಂಭತ್ತು ಮನೆಯ ಕೆಲಸ ಈಗಾಗ್ಲೇ ಮುಗಿದಿದೆ .ಅಷ್ಟೇ ಅಲ್ಲದೆ ಕರ್ನಿರೆ ಯಲ್ಲಿ ಒಕ್ಕೂಟದ ಉಪಾಧ್ಯಕ್ಷರಾದ ವಿಶ್ವನಾಥ್ ಶೆಟ್ಟಿ ಅವರು ದಾನವಾಗಿ ನೀಡಿದ ಒಂದು  ಎಕರೆ ಜಾಗದಲ್ಲಿ, ಈಗಾಗ್ಲೇ ಅವಶ್ಯಕತೆ ಇರುವವರಿಗೆ ಮನೆ ಕಟ್ಟಿಸಿ ಕೊಡುವ ಯೋಜನೆ, ಎಷ್ಟೋ ಜನರ ಸ್ವಂತ ಮನೆಯ ಕನಸನ್ನು ನನಸಾಗಿಸ ಹೊರಟಿದೆ. ಕ್ರೀಡಾಪಟುಗಳಿಗೂ ಇಲ್ಲಿದೆ ಸ್ಫೂರ್ತಿ…. ಇನ್ನು ಅದೆಷ್ಟೋ ಕ್ರೀಡಾಪಟುಗಳನ್ನು ಗುರುತಿಸಿ, ಗೌರವಿಸಿ ಅವರಿಗೆ  ಧನಸಹಾಯ ಮಾಡುವ ಕಾರ್ಯದಿಂದ, ಕ್ರೀಡಾ ಜಗತ್ತಿಗೆ ಹೊಸ ಪ್ರತಿಭೆಗಳು ಬರಲು ಪರೋಕ್ಷವಾಗಿ ಸ್ಫೂರ್ತಿ ನೀಡಿದಂತಾಗಿದೆ. ಇನ್ನು ಉನ್ನತ ವ್ಯಾಸಂಗದ ಕನಸು ಕಾಣುತ್ತಿರುವ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಧನ ಸಹಾಯದ ಜೊತೆಗೆ ಬೆನ್ನು ತಟ್ಟುವ ಮಾತುಗಳು, ಪ್ರೋತ್ಸಾಹ  ಕೇವಲ ಸಾಧಕರಿಗಷ್ಟೇ ಅಲ್ಲ,  ಅವರಿಗಷ್ಟೇ ಅಲ್ಲದೆ ಸಾಧನೆ ಮಾಡಿದ್ರೆ,ನಮಗೂ ಇಂತಹ  ಸಹಕಾರ ಸಿಗುತ್ತೆ ಅನ್ನುವ ಭರವಸೆಯನ್ನು ಅದೆಷ್ಟೋ ಮಕ್ಕಳಲ್ಲಿ ಮೂಡಲು ಕೂಡ ಕಾರಣವಾಗಿದೆ. ಕೊರೋನಾ  ಸಂಕಷ್ಟದ ಪರಿಸ್ಥಿತಿಯಲ್ಲೂ, ಬೇರೆ ಬೇರೆ ಸಂಕಷ್ಟಗಳ ನಡುವೆಯೂ, ಒಂದು ಸಾವಿರಕ್ಕೂ ಮಿಕ್ಕಿ ವಿದ್ಯಾರ್ಥಿಗಳಿಗೆ ಸುಮಾರು ಒಂದೂವರೆ ಕೋಟಿಯಷ್ಟು ವಿದ್ಯಾರ್ಥಿವೇತನ ನೀಡಿರುವುದು ನಿಜಕ್ಕೂ ಪ್ರಶಂಸನೀಯ ಸಂಗತಿ. 
ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ಇನ್ನು ಜಿಲ್ಲಾಧಿಕಾರಿಗಳ ಪ್ರಾಕೃತಿಕ ವಿಕೋಪ ಪರಿಹಾರ ನಿಧಿಗೆ, ಎರಡು ಲಕ್ಷ ರೂಪಾಯಿ ದೇಣಿಗೆ ನೀಡುವುದರ ಮೂಲಕ, ಸಾಮಾಜಿಕ ಹೊಣೆಗಾರಿಕೆಯಲ್ಲಿ ಮತ್ತೊಂದು ಹೆಜ್ಜೆ ಮುಂದಿಟ್ಟ ಹಾಗಾಗಿದೆ.  ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಒಳರೋಗಿಗಳ ಕ್ಷೇಮ ವಿಚಾರಕರಾದ ಸಂಭಂದಿಗಳು ಮತ್ತು ಪೋಷಕರಿಗೆ ವರುಷದಲ್ಲಿ ಒಂದು ಪೂರ್ತಿ  ತಿಂಗಳ ರಾತ್ರಿ ಹೊತ್ತಿನ ಉಚಿತ  ಊಟದ ವ್ಯವಸ್ಥೆಯನ್ನು 2018 ರಿಂದ ಮಾಡುತ್ತಾ ಬಂದಿದ್ದು ವಿಭಿನ್ನವಾದ ಮತ್ತೊಂದು ಯೋಜನೆಗೆ ಹಿಡಿದ ಕನ್ನಡಿ.
ನಿಮ್ಮ ಜೊತೆ ನಾವಿದ್ದೇವೆ ಬಂಟ ಸಮುದಾಯದ ಯಾರಿಗಾದ್ರೂ ನೆರವು ಬೇಕಿದ್ದಲ್ಲಿ ತಕ್ಷಣ ಅಲ್ಲಿಗೆ ಧಾವಿಸಿ, ಅವರಿಗೆ ನ್ಯಾಯ ಒದಗಿಸಿಕೊಡುವ ವಿಚಾರದಲ್ಲಿ ಸ್ವಲ್ಪವೂ ತಡಮಾಡದೆ ಪ್ರಯತ್ನಿಸುವ ಹೋರಾಟದಲ್ಲಿ, ನಿಮ್ಮ ಜೊತೆ ನಾವಿದ್ದೇವೆ, ಎನ್ನುವ ಬೆಂಬಲ ಅದೆಷ್ಟೋ ಜನರಿಗೆ ಆನೆಬಲ ನೀಡಿದ್ದಲ್ಲದೆ, ಸಂಘ ಸಂಸ್ಥೆಗಳು ಅನ್ಯಾಯದ ಪರ ಧ್ವನಿ ಎತ್ತುವ ವಿಚಾರ , ಸಮಾಜದ ಅತ್ಯಂತ ಕೆಳಸ್ತರದಲ್ಲಿರುವ ಹೋರಾಡಲು  ತಾಕತ್ತಿಲ್ಲದ ವ್ಯಕ್ತಿಯಿಂದ ಹಿಡಿದು ಅನ್ಯಾಯಕ್ಕೊಳಗಾದ ಪ್ರತೀ ವ್ಯಕ್ತಿಗೂ, ಭರವಸೆಯ ಬೆಳಕಾಗಿ ಬೆಳೆಯುತ್ತಿರುವುದು, ಒಕ್ಕೂಟದ  ಹೆಮ್ಮೆಯೇ ಸರಿ. ಕೆಲವೊಮ್ಮೆ, ಶೋಷಿತರ ಪರ ಧ್ವನಿ ಎತ್ತುವವರೇ ಇಲ್ಲದ ಪರಿಸ್ಥಿತಿಯಲ್ಲಿ, ಒಕ್ಕೂಟ ಮಾಡಿದ ಸಹಾಯ ಈಗಾಗ್ಲೇ ನೊಂದ ಅದೆಷ್ಟೋ ಮಂದಿಯ ಕಣ್ಣೀರನ್ನ ಒರೆಸಿದೆ. ಕೆಲವು ಹೋರಾಟದ ಫಲಶೃತಿಯಿಂದಾಗಿ ಒಂದಿಷ್ಟು ಜನರಿಗೆ ನ್ಯಾಯ ಸಿಕ್ಕಿರುವುದು ಈಗ ಇತಿಹಾಸ. ಇನ್ನು ಸಮಯಕ್ಕೆ ಸರಿಯಾದ ಸ್ಪಂದನೆ ಒಕ್ಕೂಟದ ಇನ್ನೊಂದು  ವಿಶೇಷತೆ ,,ಕೆಲವೊಮ್ಮೆ  ವೈದ್ಯಕೀಯ  ವಿಭಾಗದಲ್ಲಿ  ಸಹಾಯ  ಕೋರಿ  ಬರುವವರಿಗೆ  ತುರ್ತು  ಸಹಾಯದ  ಅವಶ್ಯಕತೆ  ಇದ್ದಾಗ ,,ಸ್ವಲ್ಪವೂ ತಡಮಾಡದೆ, ಅವರನ್ನು ಕಾಯಿಸದೆ ,ಸತಾಯಿಸದೆ ತತ್ಕಾಲಕ್ಕೆ ನೆರವು ನೀಡುವುದು ಒಕ್ಕೂಟದ ಮಾನವೀಯ ಮುಖಕ್ಕೆ ಇನ್ನೊಂದು ಉದಾಹರಣೆ. ಕೊಡುವುದನ್ನೇ ನೆಪವಾಗಿಸಿಕೊಂಡು, ಅತ್ಯಂತ ಹಗುರವಾಗಿ ನಡೆಸಿಕೊಳ್ಳುವ ವ್ಯವಸ್ಥೆಗಳ ನಡುವೆ ಇಂತಹ ವಿಚಾರಗಳು ವಿಶೇಷ ಅನಿಸಿಬಿಡುತ್ತವೆ.ಬಹುಮುಖೀ ವ್ಯಕ್ತಿತ್ವದ ಕನಸುಗಾರ ಸಂಘಟನಾ ಚತುರ ಅಧ್ಯಕ್ಷರು, ಕಾರ್ಯದರ್ಶಿ , ಮತ್ತವರ ತಂಡ….ಇಷ್ಟೆಲ್ಲ ಸಮಾಜ ಕಲ್ಯಾಣ ಯೋಜನೆಗಳು ಸಮರೋಪಾದಿಯಲ್ಲಿ ಸಾಗಬೇಕಾದರೆ ,ಅದಕ್ಕೊಬ್ಬ ಕನಸುಗಾರ, ರೂವಾರಿ, ಸೂತ್ರದಾರ, ಜೊತೆಗೊಂದು ಬಲಶಾಲಿಯಾದ ಟೀಮ್ ಖಂಡಿತ ಇರಲೇಬೇಕು. ಹೌದು , ಒಕ್ಕೂಟ ಮಾಡುತ್ತಾ ಬಂದಿರುವ ಈ ಎಲ್ಲ ಕೆಲಸಗಳ  ಹಿಂದೆ ಇರುವ ಶಕ್ತಿ, ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಹಾಗು ಅವರ ತಂಡ. ದಕ್ಷಿಣ ಕನ್ನಡ ಹಾಗು ಉಡುಪಿಯ ಸಮಾಜ ಬಾಂಧವರಿಗೆ, ಎಲ್ಲ ನಿಟ್ಟಿನಲ್ಲೂ , ಸಂಘದಿಂದ ಸಿಗಬಹುದಾದ ನೆರವನ್ನು ನೀಡುವ ಕೆಲಸದಲ್ಲಿ , ಸ್ವಲ್ಪವೂ ತಡಮಾಡದೆ ಗುರುತಿಸಿ, ಅಗತ್ಯಬಿದ್ದರೆ ಅದೆಷ್ಟೋ ಸ್ಥಳಗಳಿಗೆ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳೇ  ಖುದ್ದಾಗಿ ಭೇಟಿ ನೀಡಿ ನೆರವು ನೀಡುವ ಕೆಲಸದ ಜೊತೆ, ಸಾಧಕರ ಬೆನ್ನು ತಟ್ಟಿ  ಪ್ರೋತ್ಸಾಹಿಸುತ್ತಿರುವ ಕಾಯಕ ನಿಜಕ್ಕೂ ತುಂಬಾನೇ ಡಿಫರೆಂಟ್ ಹಾಗೂ  ಶ್ಲಾಘನೀಯ. ಇನ್ನು ತಮ್ಮ ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆ ಸಾಧ್ಯವಾದಾಗಲೆಲ್ಲ, ಬೇರೆ ಬೇರೆ ಊರುಗಳಲ್ಲಿರುವ, ಬಂಟರ ಸಂಘಗಳ ಕಾರ್ಯಕ್ರಮ, ಮೀಟಿಂಗ್ ಗಳಿಗೆ  ಹೋಗಿ ಅವರಿಗೆ ಬೇಕಾದ, ಸಾಧ್ಯವಾದ ಎಲ್ಲಾ ರೀತಿಯ ನೆರವು ನೀಡುವುದರ ಜೊತೆಗೆ ಉತ್ತಮ ರೀತಿಯಲ್ಲಿ ಒಗ್ಗೂಡಿಸುವ ಕಾರ್ಯವನ್ನು ಮಾಡುತ್ತಿರುವುದರಿಂದ,. ಸಂಘಗಳಲ್ಲಿ  ನಿಜವಾಗಲೂ ಹೊಸ ಹುರುಪು , ಉತ್ಸಾಹ ತುಂಬಿಬಿಟ್ಟಿದೆ .ದೇಶ ವಿದೇಶಗಳಲ್ಲಿ ನೆಲೆಸಿರುವ ಉದ್ಯಮಿಗಳು, ಸಾಧಕರು ಹಾಗೆ ಸಮಾಜ ಬಾಂಧವ ಉದ್ಯಮಿಗಳ ಕಂಪನಿಗಳ , ಸಿ ಎಸ್ ಆರ್ ಫಂಡ್ ನಲ್ಲಿ   ಒಕ್ಕೂಟಕ್ಕೂ ಕೊಡುಗೆ ನೀಡುವಂತೆ, ಅಧ್ಯಕ್ಷರು ಸತತವಾಗಿ ಮಾತಾಡಿ ಮನವೊಲಿಸಿದ್ದರ ಪರಿಣಾಮ , ಅದೆಷ್ಟೋ ಜನ ದಾನಿಗಳ ನೆರವು ಹರಿದು ಬರುತ್ತಿದ್ದು, ಮುಂದಿನ ಯೋಜನೆಗಳಿಗೆ ಹೊಸ ಹುರುಪು ಚೈತನ್ಯವನ್ನು ತುಂಬಿದಂತಾಗಿದೆ . ಲವಲವಿಕೆ, ಉತ್ಸಾಹ ತುಂಬಿಕೊಂಡು, ತಾನೂ ಸದಾ ಚಟುವಟಿಕೆಯಿಂದ ಇದ್ದು ತಂಡವನ್ನು ಹುರಿದುಂಬಿಸುತ್ತಿರುವ, ಸರಳ, ಸ್ನೇಹಮಯೀ, ವ್ಯಕ್ತಿತ್ವದ ಹರೀಶ್ ಶೆಟ್ಟಿಯವರ ಸಂಘಟನಾ ಚಾತುರ್ಯತೆ ಪ್ರಪಂಚದ ಮೂಲೆ ಮೂಲೆಯಲ್ಲಿರುವ ದಾನಿಗಳನ್ನು, ಸಂಘಗಳನ್ನು ಒಗ್ಗೂಡಿಸಿ ಸಂಘವನ್ನು ಇನ್ನಷ್ಟು ಬಲಪಡಿಸುತ್ತಿದೆ.ಇನ್ನು ಕಾರ್ಯದರ್ಶಿ  ಜಯಕರ ಶೆಟ್ಟಿಯವರ  ಚಟುವಟಿಕೆಯ ಕಾರ್ಯವೈಖರಿ, ಉಪಾಧ್ಯಕ್ಷರಾದ ಕರ್ನಿರೆ ವಿಶ್ವನಾಥ ಶೆಟ್ಟಿ ಯವರ ಬೆಂಬಲ, ಕೋಶಾಧಿಕಾರಿಗಳಾದ  ಉಳ್ತೂರು   ಮೋಹನದಾಸ್  ಶೆಟ್ಟಿ, ಜೊತೆ  ಕಾರ್ಯದಸರ್ಶಿ  ಸತೀಶ್  ಅಡಪ  ಸಂಕಬೈಲ್, ಮಂಗಳೂರಿನ  ಪ್ರಧಾನ ಕಚೇರಿಯಲ್ಲಿರುವ  ಸಚ್ಚಿದಾನಂದ್  ಶೆಟ್ಟಿ  ಹಾಗು ತಂಡದವರ  ಸಹಕಾರದಿಂದ  ಉತ್ತಮ  ರೀತಿಯ  ಸೇವೆಯನ್ನು ಅಗತ್ಯ ಇದ್ದವರಿಗೆ ಸಕಾಲದಲ್ಲಿ ತಲುಪಿಸಲು ಸಾಧ್ಯವಾಗುತ್ತಿದೆ. 
ತೋನ್ಸೆ  ಆನಂದ್  ಶೆಟ್ಟಿ,  ಕೆ ಡಿ ಶೆಟ್ಟಿ, ಕೆ  ಪಿ ಪ್ರಕಾಶ್ ಶೆಟ್ಟಿ, ಕೆ ಎಮ್  ಶೆಟ್ಟಿ,   ಕೆ ವಿಶ್ವನಾಥ್ ಶೆಟ್ಟಿ, ಹೀಗೆ ಅದೆಷ್ಟೋ ಮಹನೀಯರ,  ಕೊಡುಗೈ ದಾನಿಗಳ ಧನ ಸಹಾಯ, ಅಷ್ಟೇ ಅಲ್ಲ , ತಾವೂ ಬೆಳೆದು, ತಮ್ಮವರನ್ನು ಬೆಳೆಸುವ, ಹಾಗೆ ತಮ್ಮ ಗಳಿಕೆಯಲ್ಲಿ ಅಗ್ರಪಾಲು ಸಮಾಜಕ್ಕೆ ಮೀಸಲಾದದ್ದು ಅನ್ನುವ ಮಾನವೀಯ ಕಳಕಳಿ ,ಸಾಮಾಜಿಕ ಹೊಣೆಗಾರಿಕೆ, ಜೀವನದಲ್ಲಿ ಪ್ರಗತಿಯ ದಾರಿಯಲ್ಲಿರುವವರಿಗೆ ಹಾಗೆ ಸಾಧನೆ ಮಾಡಬೇಕು ಅನ್ನುವ ಕನಸು ಹೊತ್ತವರಿಗೆ ಬಹು ದೊಡ್ಡ ಸ್ಫೂರ್ತಿ ನೀಡುವಂತಿದೆ. ಬಂಟರ ಸಂಘಗಳ ಒಕ್ಕೂಟದ ಎಲ್ಲ ಒಳ್ಳೆಯ ಕಾರ್ಯಗಳ ಹಿಂದೆ ಇರುವ ಅತಿ ದೊಡ್ಡ ಶಕ್ತಿ , ಅದೆಷ್ಟೋ ದಾನಿಗಳ ಹೃದಯ ವೈಶಾಲ್ಯತೆ ಸಾಮಾಜಿಕ ಕಳಕಳಿಯ ಸಾಕಾರ ರೂಪ.
ವಿಶ್ವ ಬಂಟರ ಸಮ್ಮಿಲನ ಭಾಗ  2 ರ ಯಶಸ್ಸು ( ಸೆಪ್ಟೆಂಬರ್ 2018) ಈ ಕಾರ್ಯಕ್ರಮ ಬಹುಪಾಲು ಬಂಟರು ಮತ್ತು ನಾಡವರು ನೆಲೆಸಿರುವ ಕರಾವಳಿ ಕರ್ನಾಟಕದ ,ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ನಡೆದದ್ದು , ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ , ಬಂಟರು, ನಾಡವರನ್ನು ಬಂಟರ ಸಂಘ ಮಾಡುತ್ತಿರುವ ,ಮಾಡಬಹುದಾದ ಒಳ್ಳೆಯ ಕೆಲಸಗಳ ಕಡೆ ತಿರುಗಿ ನೋಡುವಂತೆ ಮಾಡುವುದರ ಜೊತೆಗೆ , ಬಂಟರ ಸಂಘವನ್ನು ಇನ್ನಷ್ಟು ಜನರ ಹತ್ತಿರ ತಂದಿತು. ಸಂಘದ ಕಾರ್ಯಗಳ ಬಗ್ಗೆ, ಸಿಗುವ ನೆರವಿನ ಬಗ್ಗೆ ಅದೆಷ್ಟೋ ಜನರ ಮನೆ ಮನಸ್ಸಿಗೆ ತಲುಪಿಸುವ ಕೆಲಸ ಮಾಡಿತು .ಈ ಸಮ್ಮೇಳನಕ್ಕೆ ಬರೋಬ್ಬರಿ ಇಪ್ಪತ್ತು ಸಾವಿರ ಜನರು ಸೇರಿದ್ದು, ವಿಶ್ವದೆಲ್ಲೆಡೆ ನೆಲೆಸಿದ್ದ ಬೇರೆ ಬೇರೆ ರಂಗದ ಸಾಧಕರು , ಉದ್ಯಮಿಗಳನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಕೆಲಸ ಮಾಡಿದ್ದಲ್ಲದೆ ,ಸಾಧಕರನ್ನು ಅಭಿನಂದಿಸುವ ಕೆಲಸದ ಮೂಲಕ , ಇನ್ನಷ್ಟು ಜನ ಸಾಧಕರನ್ನು ಸೃಷ್ಟಿಸುವ ಕೆಲಸಕ್ಕೆ ನಾಂದಿ ಹಾಡಿತು.ಹುಟ್ಟಿದೂರ  ಬಿಟ್ಟು ಬೇರೆ ಊರುಗಳಲ್ಲಿ ಸಾಧನೆ ಮಾಡಿದವರಿಗೆ ತಮ್ಮೊರಿನಲ್ಲಿ ,ತಮ್ಮವರ ನಡುವೆ ಗೌರವ ಸ್ವೀಕರಿಸುವ ಅಭೂತಪೂರ್ವ ಘಳಿಗೆಗಳಿಗೆ ಸಾಕ್ಷಿಯಾಯಿತು. ಅದೇ ಖುಷಿ ಸಂತೃಪ್ತಿಯ ಜೊತೆಗೆ ನನ್ನೂರಿಗೆ  , ನಮ್ಮವರಿಗೆ,ನಾವೂ ಕೂಡ ಏನಾದರೂ ಕೊಡುಗೆಯನ್ನ ಈ ವೇದಿಕೆಯ ಮೂಲಕ ನೀಡಬಹುದು ಅನ್ನುವ ಯೋಚನೆಯೊಂದು ಒಂದಿಷ್ಟು ಜನರ ಮನಸ್ಸಿನಲ್ಲಿ  ಹುಟ್ಟಿಕೊಂಡಿದ್ದರ ಫಲವಾಗಿ , ಹನ್ನೆರಡು ಜನ ನಿರ್ದೇಶಕರು ,ಮಹಾಪೋಷಕರು ,ಪೋಷಕರು ಸದಸ್ಯರಾಗಿ ಸೇರಿಕೊಂಡರು. ಈ ಕಾರ್ಯಕ್ರಮದ ಒಟ್ಟು  ಯಶಸ್ಸು ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ ಮತ್ತು ಅವರ ತಂಡಕ್ಕೆ ಸಲ್ಲುತ್ತದೆ. ಮಾದರಿ ಸಂಘಟನೆ ಒಂದೇ ಮಾತಿನಲ್ಲಿ ಹೇಳುವುದಾದರೆ ಬಂಟರ ಸಂಘಗಳ ಒಕ್ಕೂಟ , ಹತ್ತು ಹಲವು ವಿಭಾಗಗಳಲ್ಲಿ ಬಹುಮುಖೀ ಚಟುವಟಿಕೆಗಳ ಮೂಲಕ, ಬಂಟ ಸಮಾಜದ ಹೆಮ್ಮೆ ಅಷ್ಟೇ ಅಲ್ಲದೆ ಇತರ ಸಂಘ ಸಂಸ್ಥೆ, ಹಾಗೆ , ಸಂಘಟನೆಗಳ ಕಾರ್ಯಗಳಿಗೂ ಮಾದರಿಯಾಗುವತ್ತ ದಾಪುಗಾಲಿಡುತ್ತಿದೆ.ಕೆಲವೊಮ್ಮೆ ಹಣ ನೀಡುವ ಮಹಾನ್ ವ್ಯಕ್ತಿಗಳು  ಗುಣಕ್ಕೆ ಮತ್ಸರ ಇಲ್ಲ ಅನ್ನುವ ಮಾತಿದೆ. ಜಾತ್ಯಾತೀತವಾಗಿ , ಬಂಟರ ಸಂಘಗಳ ಒಕ್ಕೂಟ ಮಾಡುತ್ತಾ ಬಂದಿರುವ ಒಳ್ಳೆ  ಕೆಲಸಗಳ    ಬಗ್ಗೆ , ಜೊತೆಗೆ ಉತ್ತಮ ನಾಯಕತ್ವ ಗುಣದಿಂದ  ಎಲ್ಲರಿಗೂ ಮಾದರಿಯಾಗಿ ಎಲ್ಲರನ್ನು ಒಗ್ಗೂಡಿಸಿ ,  ಜಾತಿ ಸಂಘಟನೆಯೊಂದು ಇಷ್ಟೆಲ್ಲ ಅಭಿವೃದ್ಧಿ  ಕೆಲಸಗಳನ್ನು, ಮಾಡಲು ಸಾಧ್ಯ ಎಂದು ತೋರಿಸಿಕೊಟ್ಟಿರುವ, ವಿಚಾರಗಳನ್ನು ಹಂಚಿಕೊಳ್ಳುವುದರ ಹಿಂದೆ ಯಾವ ಉತ್ಪ್ರೇಕ್ಷೆಯೂ ಇಲ್ಲ ಅತಿಶಯೋಕ್ತಿಯoತೂ  ಖಂಡಿತ ಇಲ್ಲ. ಉತ್ತಮ ವಿಚಾರಗಳು , ಅದರಲ್ಲೂ ಇಂತಹ ಧನಾತ್ಮಕ ವಿಚಾರಗಳು ಒಂದಿಷ್ಟು ಮನಸುಗಳ ಕದ ತಟ್ಟಿ, ಇಂತಹ ಹತ್ತು ಹಲವು ಸಮಾಜಪರ ಸಂಘಟನೆಗಳು ಇನ್ನಷ್ಟು ಹುಟ್ಟಿಕೊಂಡರೆ, ಇಷ್ಟೆಲ್ಲ  ಧನಾತ್ಮಕ ವಿಚಾರಗಳನ್ನು  ಹಂಚಿಕೊಂಡ ಉದ್ದೇಶಕ್ಕೂ  ಸಾರ್ಥಕತೆ ಬಂದೀತು..
ಹೀಗೆ ಸಮರೋಪಾದಿಯಲ್ಲಿ ಒಳ್ಳೆಯ ಕೆಲಸಗಳನ್ನ ಮಾಡುತ್ತಾ ಬಂದಿರುವ ಅದೆಷ್ಟೋ ವ್ಯಕ್ತಿ ಸಂಘ ಸಂಸ್ಥೆಗಳು ಇಲ್ಲವೆಂದಲ್ಲ, ಅದನ್ನು ಗುರುತಿಸಿ ಮೆಚ್ಚಿಕೊಳ್ಳುವ ಒಳ್ಳೆ ಮನಸುಗಳು ಬೇಕಷ್ಟೆ. ತೆರೆ ಮರೆಯಲ್ಲಿ, ಹಾಗೇ ತೆರೆ ಮೇಲೆ ಇಂತಹ ಒಳ್ಳೆ ಕೆಲಸಗಳನ್ನು ಮಾಡುತ್ತಿರುವ,  ಮಹಾನ್ ವ್ಯವಸ್ಥೆಗಳಿಗೊಂದು ಶರಣು …. ಆರ್ ಜೆ . ನಯನಾ  ಶೆಟ್ಟಿ

Related Posts

Leave a Comment