ಕಲಬುರಗಿ: ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬಳು ಒಂಬತ್ತು ವರ್ಷದ ಮಗನೊಂದಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ. ಮೃತರನ್ನು ಸುಚಿತ್ರಾ (34 ವ), ಮತ್ತವರ ಮಗ ವಿನೀತ್ (9) ಎಂದು ಗುರುತಿಸಲಾಗಿದೆ. ಓಂ ನಗರದಲ್ಲಿರುವ ಅಪಾರ್ಟ್ಮೆಂಟ್ ನಲ್ಲಿರುವ ಈ ದುರಂತ ನಡೆದಿದ್ದು, ಇಬ್ಬರೂ ಒಂದೇ ಫ್ಯಾನ್ ಗೆ ಸೀರೆಯಿಂದ ನೇಣು ಬಿಗಿದುಕೊಂಡಿದ್ದಾರೆ. ಸುಚಿತ್ರಾ ಪತಿ ಜಗದೀಶ್ ಕಾಂಬಳೆ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಕಾಳಗಿ ಪಟ್ಟಣದ ಬ್ಯಾಂಕ್ ನಲ್ಲಿ ಸಹಾಯಕ ವ್ಯವಸ್ಥಾಪಕರಾಗಿರುವ ಜಗದೀಶ್ ಕಾಂಬಳೆ, ಸುಚಿತ್ರಾಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದ. ಮಾನಸಿಕ ಅಸ್ವಸ್ಥ ಮಗುವಿನ ಕಾರಣವಾಗಿ ದಿನವೂ ದಂಪತಿ ಜಗಳವಾಡುತ್ತಿದ್ದರು. ಇದೇ ವಿಷಯವಾಗಿ ಆಗಾಗ್ಗೆ ಕಿರುಕುಳ ನೀಡುತ್ತಿದ್ದ. ಹೀಗಾಗಿ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮಗುವಿನೊಂದಿಗೆ ಸುಚಿತ್ರಾ ನೇಣು ಬಿಗಿದುಕೊಂಡಿದ್ದಾರೆ. ರಾತ್ರಿ 9 ಗಂಟೆಗೆ ಆಗಮಿಸಿದ ಜಗದೀಶ್ ಮನೆಯಲ್ಲಿ ಹೆಂಡತಿ ಮಗ ನೇಣು ಬಿಗಿದುಕೊಂಡಿರುವುದನ್ನು ನೋಡಿ, ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸುಚಿತ್ರಾ ಪೋಷಕರು ಬೆಳಗಾವಿಯಲ್ಲಿ ನೆಲೆಸಿದ್ದು, ವಿಷಯ ತಿಳಿದು ಅವರು ನಗರಕ್ಕೆ ಈಗಾಗಲೇ ಆಗಮಿಸಿದ್ದಾರೆ. ಸುಚಿತ್ರಾ ಮತ್ತು ಬಾಲಕನ ಸಾವಿನ ಬಗ್ಗೆ ಆಕೆಯ ತಂದೆ ನೀಡಿರುವ ದೂರಿನ ಮೇರೆಗೆ ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದದ್ದು ಜಗದೀಶ್ ಕಾಂಬಳೆಯನ್ನು ವಶಕ್ಕೆ ಪಡೆಯಲಾಗಿದೆ.
ನಿತ್ಯವೂ ಪತಿಯ ಕಿರುಕುಳ: ಕಲಬುರಗಿಯಲ್ಲಿ 9 ವರ್ಷದ ಮಗನನ್ನು ಕೊಂದು ಗೃಹಿಣಿ ಆತ್ಮಹತ್ಯೆ
previous post