Home Kannada ಪೂಜಾ ಪ್ರಕಾಶನ ಮುಂಬಯಿ ವತಿಯಿಂದ ನಾಲ್ಕು ಕೃತಿಗಳ ಲೋಕಾರ್ಪಣೆ.

ಪೂಜಾ ಪ್ರಕಾಶನ ಮುಂಬಯಿ ವತಿಯಿಂದ ನಾಲ್ಕು ಕೃತಿಗಳ ಲೋಕಾರ್ಪಣೆ.

by akash

ಜೀವನದಲ್ಲಿ ಭಾಷೆ, ಸಂಸ್ಕೃತಿ-ಸಂಸ್ಕಾರದ ಸಂಬಂಧವನ್ನು ಅರಿತುಕೊಳ್ಳುವುದು ಬಹಳ ಅಗತ್ಯ-ಡಾ. ಸತ್ಯ ಪ್ರಕಾಶ್ ಶೆಟ್ಟಿ ಚಿತ್ರ ವರದಿ: ಉಮೇಶ್ ಕೆ.ಅಂಚನ್. ಮುಂಬಯಿ, ಡಿ 9. ಕಾಲ್ಪನಿಕ ಲೋಕವನ್ನು ಬರಹದ ರೂಪದಲ್ಲಿ ತರುವವನೇ ಕವಿ, ಲೇಖಕ. ಕವಿ, ಸಾಹಿತಿಯಾದವರಿಗೆ ಸೂಕ್ಷ್ಮ ಗ್ರಹಿಕೆ ಅಗತ್ಯ. ಕವಿ, ಸಾಹಿತಿಗಳು ರಸಿಕರಾಗಿರಬೇಕು. ಹೃದಯ ಶ್ರೀಮಂತಿಕೆ ಅವರಲ್ಲಿರಬೇಕು. ನಮ್ಮ ಭಾಷೆ, ಸಂಸ್ಕೃತಿ ಸಂಸ್ಕಾರವನ್ನು ಉಳಿಸಿ-ಬೆಳೆಸುವ ಜೊತೆಗೆ ಸಮಾಜವನ್ನು ತಿದ್ದುವ ಕೆಲಸವನ್ನು ಸಾಹಿತಿಗಳು, ಕವಿಗಳು ಮಾಡಬೇಕು. 8 ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಭಾಷೆಯು ದೇಶದಲ್ಲಿನ ವಿಶಿಷ್ಟ ಹಾಗೂ ಶ್ರೀಮಂತ ಭಾಷೆಯಾಗಿದೆ. ಅಲ್ಲದೆ ನಮ್ಮ ತುಳು ಭಾಷೆಗೆ ಎರಡು ಸಾವಿರ ವರ್ಷಗಳ ಇತಿಹಾಸವಿದೆ. ತುಳುಭಾಷೆಯಲ್ಲಿ ಲಿಪಿ ಇದ್ದರೂ ಅದನ್ನು ನಮಗೆ ಎಂಟನೇ ಪರಿಚ್ಛೇದಕ್ಕೆ ಸೇರಿಸಿಕೊಳ್ಳಲಾಗಲಿಲ್ಲ. ಈ ಬಗ್ಗೆ ನಾವು ಪ್ರಯತ್ನಶೀಲರಾಗಬೇಕು. ಎಂದು ಮುಳುಂಡ್ ಶಿವಾನಿ ಹಾಸ್ಪಿಟಲಿನ ಶಿಶು ತಜ್ಞ ಹಾಗೂ ಬಂಟರ ಸಂಘದ ಬಂಟ್ಸ್ ಹೆಲ್ತ್ ಸೆಂಟರಿನ ಕಾರ್ಯಾದ್ಯಕ್ಷ ಡಾ. ಸತ್ಯ ಪ್ರಕಾಶ್ ಶೆಟ್ಟಿ ನುಡಿದರು.
ಅವರು ಡಿ.5 ರಂದು ಬೊರಿವಲಿ ಪಶ್ಚಿಮದ ಜಯರಾಜ ನಗರ ಮಹಿಷಮರ್ದಿನಿ ದೇವಸ್ಥಾನದ ಸಭಾಗೃಹದಲ್ಲಿ ಪೂಜಾ ಪ್ರಕಾಶನ ಮುಂಬಯಿ ವತಿಯಿಂದ ಆಯೋಜಿಸಲ್ಪಟ್ಟ ಕೃತಿ ಬಿಡುಗಡೆ ಸಮಾರಂಭದಲ್ಲಿ ಅಧ್ಯಕ್ಷ ಸ್ಥಾನದಿಂದ ಮಾತನಾಡಿದರು. ವಿಜ್ಞಾನದಿಂದ ನಮಗೆ ಸುಖ ಸಿಗಬಹುದು. ಆದರೆ ಶಾಂತಿ ನೆಮ್ಮದಿ ಸಿಗಲು ಸಾಧ್ಯವಿಲ್ಲ. ವಿಜ್ಞಾನದ ಜೊತೆ ಆಧ್ಯಾತ್ಮ ಸೇರಿಕೊಂಡಾಗ ಮಾತ್ರ ಜೀವನ ಸಫಲತೆಯನ್ನು ಕಾಣಬಹುದು. ನಮ್ಮಲ್ಲಿ ಕೇವಲ ಹಣ, ಸಂಪತ್ತು, ಆಸ್ತಿ ಇದ್ದಲ್ಲಿ ನಾವು ಉತ್ತಮ ಆರೋಗ್ಯವಂತರಾಗಿ ಇರಲು ಸಾಧ್ಯವಿಲ್ಲ. ದೈಹಿಕವಾಗಿ, ಸಾಮಾಜಿಕವಾಗಿ ಹಾಗೂ ಆಧ್ಯಾತ್ಮಿಕವಾಗಿ ನಾವು ಆರೋಗ್ಯವಂತರಾಗಿರಬೇಕು. ಹಾಗಾದಲ್ಲಿ ನಾವು ಪರಿಪೂರ್ಣ ಆರೋಗ್ಯವಂತರಾಗಲು ಸಾಧ್ಯ. ಆರೋಗ್ಯವೇ ನಮ್ಮ ಸಂಪತ್ತು. ಅದನ್ನು ಕಾಪಾಡಿಕೊಳ್ಳುವರೇ ಕಾಳಜಿ ಅಗತ್ಯ ಎಂದ ಡಾ ಸತ್ಯ ಪ್ರಕಾಶ್ ಶೆಟ್ಟಿ ಅವರು ನಮ್ಮ ಭಾಷೆ ,ಸಂಸ್ಕೃತಿ, ನಂಬಿಕೆ, ಆರಾಧನೆಗಳ ಬಗ್ಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸಬೇಕು. ದೈವ ನಂಬಿಕೆಗಳು ಮೂಢನಂಬಿಕೆಯಲ್ಲ. ಅದು ನಮ್ಮ ಮೂಲನಂಬಿಕೆ. ಈ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ. ನಂಬಿಕೆ ಎಂಬುದು ಆಧ್ಯಾತ್ಮದ ತಳಹದಿಯಾಗಿದೆ ಎಂದರು. ಜೀವನದಲ್ಲಿ ಭಾಷೆ ,ಸಂಸ್ಕೃತಿ, ಸಂಸ್ಕಾರದ ಸಂಬಂಧವನ್ನು ಅರಿತುಕೊಳ್ಳುವುದು ಬಹಳ ಅಗತ್ಯ. ಕೃತಿಗಳ ಮೂಲಕ ಕನ್ನಡ ತುಳು ಭಾಷೆ ಹಾಗೂ ಸಂಸ್ಕೃತಿಯನ್ನು ಶ್ರೀಮಂತರಾಗಿಸಿದ ಸಾಹಿತಿ, ಕವಿಗಳ ಕಾರ್ಯ ಶ್ಲಾಘನೀಯ ಎಂದ ಡಾ. ಸತ್ಯಪ್ರಕಾಶ್ ಶೆಟ್ಟಿಯವರು ಸಾಹಿತಿ ಕವಿಗಳಾದ ಶಿಮಂತೂರು ಚಂದ್ರಹಾಸ ಸುವರ್ಣ, ಶಾರದಾ ಅಂಚನ್ ಹಾಗೂ ಸುಶೀಲಾ ಅಮೀನ್ ಅವರನ್ನು ಅಭಿನಂದಿಸಿದರು. ಮುಖ್ಯ ಅತಿಥಿ ಉದ್ಯಮಿ, ರಾಜಕೀಯ ಧುರೀಣ, ಸಮಾಜಸೇವಕ ಎರ್ಮಾಳ್ ಹರೀಶ್ ಶೆಟ್ಟಿಯವರು ಪ್ರಶಸ್ತಿ ವಿಜೇತ ಕವಿ ಶಿಮಂತೂರು ಚಂದ್ರಹಾಸ ಸುವರ್ಣರ 18ನೇ ಕೃತಿ ‘ಶಿಮಂತೂರಿನ ಸಿರಿ’ ಪ್ರಶಸ್ತಿ ಪುರಸ್ಕೃತ ಕವಯತ್ರಿ ಶಾರದಾ ಆನಂದ್ ಅಂಚನ್ ರವರ 13ನೇ ಕೃತಿ ‘ಸೂರ್ಯ ಚಂದ್ರ’ ಮತ್ತು 14ನೇ ಕೃತಿ ಕವನಸಂಕಲನ ‘ಲಾಕ್ ಡೌನ್’ ಹಾಗೂ ಉದಯೋನ್ಮುಖ ಲೇಖಕಿ ಕೊಡವೂರು ಸುಶೀಲಾ ಸತೀಶ್ ಅಮೀನ್ ರವರ ಪ್ರಥಮ ಚೊಚ್ಚಲ ಕೃತಿ ‘ಹೊಸ್ತಿಲ ಹೂ’ ಕಥಾ ಸಂಕಲವನ್ನು ಬಿಡುಗಡೆ ಮಾಡಿದರು.ತಮ್ಮ ಕಥೆ ಕವನಗಳ ಮೂಲಕ ಸಮಾಜವನ್ನು ತಿದ್ದಿ ಮಾನವನ ಬದುಕನ್ನು ಪರಿವರ್ತನೆಗೊಳಿಸುವ ಶಕ್ತಿ ಲೇಖಕರಿಗಿದೆ. ಇದರಿಂದ ಅವರ ಹೆಸರು ಶಾಶ್ವತವಾಗಿ ಉಳಿಯುತ್ತದೆ ಹಾಗೂ ತಮ್ಮಿಂದ ಇಂತಹ ಇನ್ನೂ ಹಲವಾರು ಕೃತಿಗಳು ಬೆಳಕಿಗೆ ಬರಲಿ ಎಂದು ಹರೀಶ್ ಶೆಟ್ಟಿ ಯವರು ಶುಭ ಹಾರೈಸಿದರು. ಅಕ್ಷಯ ಮಾಸಿಕದ ಸಂಪಾದಕ ಹರೀಶ್ ಹೆಜಮಾಡಿ ಕೃತಿಗಳನ್ನು ಪರಿಚಯಿಸಿ ಲೇಖಕರಿಗೆ ಶುಭಕೋರಿದರು. ಪೂಜಾ ಪ್ರಕಾಶನದ ರುವಾರಿ ಶಿಮಂತೂರು ಚಂದ್ರಹಾಸ ಸುವರ್ಣ, ಲೇಖಕಿಯರಾದ ಶಾರದಾ ಆನಂದ ಅಂಚನ್ ಮತ್ತು ಸುಶೀಲಾ ಸತೀಶ್ ಅಮೀನ್ ರವರು ತಮ್ಮ ಕೃತಿ ರಚನೆಯಲ್ಲಿ ಸಹಕರಿದವರನ್ನು ನೆನಪಿಸಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಉಪಸ್ಥಿತರಿದ್ದ ಲೇಖಕರು, ಸಾಹಿತ್ಯಾಭಿಮಾನಿಗಳು ಕೃತಿಕಾರರನ್ನು ಅಭಿನಂದಿಸಿದರು. ಸರಸ್ವತಿ ಸಿ.ಸುವರ್ಣ,ವಿತೋಷ್, ಆನಂದ್ ಅಂಚನ್,ಸತೀಶ್ ಅಮೀನ್, ಮೀನಾ ಪೂಜಾರಿ, ಹರ್ಷ ಪಾಲನ್ ಅತಿಥಿಗಳನ್ನು ಗೌರವಿಸಿದರು. ಶಾರದಾ ಅಂಚನ್ ರವರ ಪ್ರಾರ್ಥನೆ ಯೊಂದಿಗೆ ಅತಿಥಿಗಳು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು .ಭಾರತ್ ಬ್ಯಾಂಕಿನ ಪ್ರಭಂಧಕ ನವೀನ್ ಕರ್ಕೇರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೃಷ್ಣರಾಜ ಸುವರ್ಣ ವಂದಿಸಿದರು.

Related Posts

Leave a Comment

Translate »