Home Kannada ಪ್ರೇಮಿ ಜೊತೆ ಸೇರಿ ಗಂಡನ ಕೊಲೆಗೆ ಸುಪಾರಿ ನೀಡಿದ ಪತ್ನಿ ಸೇರಿ 9 ಜನ ಅಂದರ್

ಪ್ರೇಮಿ ಜೊತೆ ಸೇರಿ ಗಂಡನ ಕೊಲೆಗೆ ಸುಪಾರಿ ನೀಡಿದ ಪತ್ನಿ ಸೇರಿ 9 ಜನ ಅಂದರ್

by Eha

ಬೆಂಗಳೂರು: ನಗರದಲ್ಲಿ ವಿವಾಹೇತರ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ ಮಾಡಿಸಿದ್ದ ಪತ್ನಿ ಸೇರಿ 9 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ದುಗುಂಟೆಪಾಳ್ಯದಲ್ಲಿ ಬಾಡಿಗೆ ಮನೆಯೊಂದರಲ್ಲಿ ಮೊಹಮ್ಮದ್ ಶಫಿ ದಂಪತಿ ವಾಸವಾಗಿದ್ದರು‌‌. ಶಫಿ ರಿಯಲ್ ಎಸ್ಟೇಟ್ ಏಜೆಂಟ್ ಆಗಿದ್ದ‌‌. ದಂಪತಿ ಇಬ್ಬರು ಸಹ ಅನ್ಯೋನ್ಯವಾಗಿದ್ದರು. ಹೀಗೆ ಇರಬೇಕಾದರೆ ಎರಡು ವರ್ಷಗಳ ಹಿಂದೆ ತಸ್ನೀಮ​ಬಾನುಗೆ ಸಂಬಂಧಿಕರ ಕಾರ್ಯಕ್ರಮದಲ್ಲಿ‌ ಅಪ್ಸರ್ ಖಾನ್ ಎಂಬಾತನ ಪರಿಚಯವಾಗಿದೆ‌‌‌. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು ಕ್ರಮೇಣ ಪ್ರೀತಿಗೆ ತಿರುಗಿದೆ‌. ಎರಡು ವರ್ಷಗಳಿಂದ ಇವರ ವಿವಾಹೇತರ ಸಂಬಂಧ ಮುಂದುವರೆದಿತ್ತು‌. ಮೊಹಮ್ಮದ್ ಶಫಿ ಮೂಲಕ‌ ಮೈಸೂರಿನಲ್ಲಿ‌ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹಣ ಹೂಡಿಕೆ ಮಾಡಿಸಿ 5 ಲಕ್ಷ ರೂ. ಕಮೀಷನ್ ನೀಡುವುದಾಗಿ ಭರವಸೆ ನೀಡಿದ್ದ. ಇದೇ ಸೋಗಿನಲ್ಲಿ ಅಪ್ಸರ್ ಖಾನ್ ಆಗಾಗ‌ ಶಫಿ ಮನೆಗೆ ಬಂದು ಹೋಗುತ್ತಿದ್ದ. ಈ ನಡುವೆ ಮಾಟ ಮಂತ್ರದ ಮೂಲಕ ಶಫಿಯನ್ನು ಸಾಯಿಸುವ ಪ್ರಯತ್ನ ವಿಫಲವಾಗಿತ್ತಂತೆ. ವಿವಾಹೇತರ ಸಂಬಂಧಕ್ಕೆ ಗಂಡ ಮೊಹಮ್ಮದ್ ಶಫಿ ಅಡ್ಡಿ ಬರುವುದಾಗಿ ಭಾವಿಸಿದ ಪತ್ನಿ ತಸ್ನೀಮ​ಬಾನು‌ ಹಾಗೂ ಪ್ರಿಯಕರ ಅಪ್ಸರ್ ಖಾನ್ ಆತನ ಕೊಲೆಗೆ ಸುಪಾರಿ ನೀಡಲು ತೀರ್ಮಾನಿಸಿದ್ದಾರೆ. ಅದರಂತೆ ಅಪ್ಸರ್ ಖಾನ್​ಗೆ ಪರಿಚಯವಿದ್ದ ಹಾಗೂ ಕ್ರಿಮಿನಲ್ ಹಿನ್ನೆಲೆಯುಳ್ಳ ತಬ್ರೇಜ್ ಪಾಷಾ ಹಾಗೂ ಸೈಯ್ಯದ್ ವಸೀಂಗೆ ಸುಪಾರಿ ನೀಡಿದ್ದರು. ಇವರಿಗೆ ಪರಿಚಯವಿರುವ ಸಹಚರರನ್ನು ಒಗ್ಗೂಡಿಸಿ ಕೊಲೆ ಮಾಡಲು ಒಪ್ಪಿಕೊಂಡಿದ್ದಾರೆ.‌

ಮಾ.19 ರಂದು ಕಮೀಷನ್ ಹಣ 5 ಲಕ್ಷ ರೂಪಾಯಿ ನೀಡುವುದಾಗಿ ಮೊಹಮ್ಮದ್ ಶಫಿಯನ್ನು ನ್ಯೂ ಟಿಂಬರ್ ಗಲ್ಲಿಗೆ ಅಪ್ಸರ್ ಖಾನ್ ಕರೆಯಿಸಿಕೊಂಡಿದ್ದಾನೆ‌. ಅಲ್ಲಿಗೆ ಬಂದಿದ್ದ ಶಫಿಯನ್ನು ಆರೋಪಿಗಳು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ಮೃತ ಮೊಹಮ್ಮದ್ ಶಫಿ‌ ತಂದೆ ನೀಡಿದ‌ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ವೇಳೆ ಮಹಮ್ಮದ್​ ಶಫಿ ಪತ್ನಿಯ ವಿವಾಹೇತರ ಸಂಬಂಧ ಬೆಳಕಿಗೆ ಬಂದಿತ್ತು. ಹೀಗಾಗಿ ಶಫಿ ಹೆಂಡ್ತಿ ತಸ್ನೀಮಬಾನುಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಮಾಹಿತಿ ಹೊರಬಿದ್ದಿದೆ. ಶಫಿ ಹೆಂಡತಿ ತಸ್ನೀಮ​ಬಾನು, ಈಕೆಯ ಪ್ರಿಯಕರ ಅಫ್ಸರ್ ಖಾನ್, ಸುಪಾರಿ ಪಡೆದ ತಬ್ರೇಜ್ ಪಾಷಾ, ಸೈಯದ್ ವಸೀಂ, ವೆಂಕಟೇಶ್, ಭರತ್, ಯುಗೇಂದ್ರ, ಚೇತನ್ ಹಾಗೂ ಇಬ್ರಾಹಿಂ ಸೇರಿದಂತೆ ಪೊಲೀಸರು ಒಟ್ಟು 9 ಜನರನ್ನು ಬಂಧಿಸಿ ಆರೋಪಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಿದ್ದಾರೆ‌‌. ಈ ಬಗ್ಗೆ ನಗರ ಆಗ್ನೇಯ ವಿಭಾಗದ ಡಿಸಿಪಿ ಶ್ರೀನಾಥ್ ಮಹದೇವ್ ಜೋಷಿ ಮಾಹಿತಿ ನೀಡಿದ್ದಾರೆ.

Related Posts

Leave a Comment