Home Kannada ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಬಳಿಯಿದ್ದ ಅನ್​ಲೋಡೆಡ್ ಗನ್ ಕದ್ದ ಖದೀಮರು!

ಬೆಂಗಳೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಬಳಿಯಿದ್ದ ಅನ್​ಲೋಡೆಡ್ ಗನ್ ಕದ್ದ ಖದೀಮರು!

by Eha

ಬೆಂಗಳೂರು: ಆ ಏರಿಯಾದಲ್ಲಿ ಹೆಚ್ಚು ಕಳ್ಳತನವಾಗುತ್ತೆ‌ ಅಂತಾ ಖಾಸಗಿ ಸೆಕ್ಯೂರಿಟಿ ಗಾರ್ಡ್​ಗಳನ್ನು ನಿಯೋಜನೆ ಮಾಡಲಾಗಿತ್ತು. ಆದ್ರೂ ಸಹ ಖದೀಮರು ಸೆಕ್ಯೂರಿಟಿ ಗಾರ್ಡ್ ಬಳಿಯಿದ್ದ ಅನ್​ಲೋಡೆಡ್ ಗನ್​ನನ್ನೇ ಕಳ್ಳತನ ಮಾಡುವ ಮೂಲಕ ತಮ್ಮ ಕೈಚಳಕ ಮುಂದುವರಿಸಿದ್ದಾರೆ‌. ದೊಡ್ಡಕಲ್ಲಸಂದ್ರ ನಿವಾಸಿ ಹರೀಶ್ ಜೆ.ಎಂ ಗನ್ ಕಳೆದುಕೊಂಡಿರುವ ಸೆಕ್ಯೂರಿಟಿ ಗಾರ್ಡ್. ಇವರು ಕಳೆದ ನಾಲ್ಕು ತಿಂಗಳಿಂದ ಖಾಸಗಿ ಸೆಕ್ಯೂರಿಟಿ ಏಜೆನ್ಸಿಯೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಮಾಗಡಿ ರಸ್ತೆಯಲ್ಲಿರುವ ರೈಲ್ವೆ ಕಾಲೋನಿಯಲ್ಲಿ ಕಳ್ಳರ ಕಾಟ ಹೆಚ್ಚಾಗಿತ್ತು.

ಕಳ್ಳರ ಹಾವಳಿ ನಿಯಂತ್ರಿಸುವ ಸಲುವಾಗಿ ಹರೀಶ್​ನನ್ನು ಕಂಪನಿ ಆ ಕಾಲೋನಿಯಲ್ಲಿ ನಿಯೋಜಿಸಿತ್ತು. ಫೆ.1ರಂದು ರಾತ್ರಿ ಎಂದಿನಂತೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದ ಹರೀಶ್​ಗೆ ಬೆಳಗಿನ ಜಾವ ನಿದ್ರೆ ಬಂದಿದೆ. ಅನ್​ಲೋಡೆಡ್ ಗನ್ ಹಾಗೂ ಮೊಬೈಲ್ ಪಕ್ಕಕ್ಕಿಟ್ಟು ಹರೀಶ್​ ಮಲಗಿದ್ದಾರೆ‌‌. ಕೆಲ ಹೊತ್ತಿನ ಬಳಿಕ ಹರೀಶ್ ಎದ್ದು ನೋಡಿದಾಗ ಗನ್ ಹಾಗೂ ಮೊಬೈಲ್ ಕಳ್ಳತನ ಆಗಿರುವುದು ಗೊತ್ತಾಗಿದೆ. ಸದ್ಯ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಖದೀಮರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

Related Posts

Leave a Comment