Home Kannada ಮಂಗಳೂರು : ದರೋಡೆ ನಾಟಕವಾಡಿ ಸಿಕ್ಕಿಬಿದ್ದ ಹವಾಲ ದಂಧೆಕೋರರು

ಮಂಗಳೂರು : ದರೋಡೆ ನಾಟಕವಾಡಿ ಸಿಕ್ಕಿಬಿದ್ದ ಹವಾಲ ದಂಧೆಕೋರರು

by Eha

ಮಂಗಳೂರು : ಹವಾಲ ದಂಧೆ ನಡೆಸುತ್ತಿದ್ದವರು ಏಕಾಏಕಿ ಹಣ ಮಾಡಲು ದರೋಡೆ ನಾಟಕ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಈ ಕುರಿತು ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್, ಮಾರ್ಚ್ 4 ರಂದು ದಾಖಲಾದ ದರೋಡೆ ಪ್ರಕರಣ ಬೇಧಿಸಿದಾಗ ಮಂಗಳೂರಿನಲ್ಲಿ ಹವಾಲ ದಂಧೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಈ ಪ್ರಕರಣದಲ್ಲಿ ಮೊಹಮ್ಮದ್ ರಿಫಾತ್ ಆಲಿ, ಅಶ್ಫಾಕ್, ಜಾಫರ್ ಸಾದಿಕ್, ಮೊಹಮ್ಮದ್ ಇಸ್ಮಾಯಿಲ್ ಮತ್ತು ಕೆ.ಹೆಚ್. ಮಯ್ಯದಿ ಎಂಬ ಐವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು‌. ಮಾರ್ಚ್ 4 ರಂದು ಅಬ್ದುಲ್ ಸಲಾಂ ಎಂಬವರು ಫೆಬ್ರವರಿ 22 ರಂದು ತನ್ನ ಹಣ ದರೋಡೆಯಾಗಿದೆ ಎಂದು ದೂರು ನೀಡಿದ್ದರು. ಅಕ್ಕನ ಮಗಳ ಮದುವೆಗೆ ಚಿನ್ನಾಭರಣ ಖರೀದಿಸಲು ಇತರರಿಂದ ಸಂಗ್ರಹಿಸಲಾದ 16 ಲಕ್ಷ ರೂ. ಹಣ ಸ್ಕೂಟರ್​ನಲ್ಲಿ ಕೊಂಡೊಯ್ಯುತ್ತಿದ್ದ ವೇಳೆ, ಹೊಡೆದು ಹಣ ದರೋಡೆ ಮಾಡಲಾಗಿದೆ ಎಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಸಿಸಿಟಿವಿ ಪರಿಶೀಲನೆ ನಡೆಸಿದಾಗ ನಾಲ್ವರು ದರೋಡೆ ಮಾಡಿ ಹಣ ಕೊಂಡೊಯ್ಯುವ ದೃಶ್ಯ ದಾಖಲಾಗಿತ್ತು. ಈ ಬಗ್ಗೆ ಮತ್ತಷ್ಟು ತನಿಖೆ ಕೈಗೊಂಡಾಗ, ಇದರ ಹಿಂದೆ ಹವಾಲ ಜಾಲ ಇರುವುದು ಪತ್ತೆಯಾಗಿದೆ ಎಂದರು.

ಪ್ರಕರಣದ ತನಿಖೆ ನಡೆಸಿದ ಪೊಲೀಸರಿಗೆ ದೂರು ನೀಡಿದವನೇ ಆರೋಪಿ ಎಂಬುದು ತಿಳಿದು ಬಂದಿದೆ. ಈತ ಹವಾಲ ಹಣ ಸಾಗಾಟದ ಕೆಲಸ ಮಾಡುತ್ತಿದ್ದು, ಇತರರಿಗೆ ತಲುಪಿಸಬೇಕಿದ್ದ ಹವಾಲ ಹಣವನ್ನು ತನ್ನಲ್ಲೇ ಇಟ್ಟುಕೊಳ್ಳಲು ದರೋಡೆ ನಾಟಕ ಮಾಡಿದ್ದ. ತಿಂಗಳಿಗೆ 8 ಸಾವಿರ ರೂ. ಸಂಬಳ ಪಡೆದು ಹವಾಲ ಹಣ ತಲುಪಿಸಿ, ಬಳಿಕ ಕಮಿಷನ್ ಪಡೆಯುತ್ತಿದ್ದ. ಹೀಗೆ ಹವಾಲ ಹಣವನ್ನು ಲಪಾಟಾಯಿಸಲು ತನ್ನ ಏಜೆಂಟ್​ಗಳ ಮೂಲಕ ದರೋಡೆ ನಾಟಕ ಮಾಡಿದ್ದ. ಹಣ ದರೋಡೆಯಾಗಿದೆ ಎಂದು ದೂರು ನೀಡಿದರೆ ಹಣ ಪಡೆಯಬೇಕಾದವರು ಹಣಕ್ಕಾಗಿ ಒತ್ತಾಯಿಸುವುದಿಲ್ಲ ಎಂದು ಆಲೋಚಿಸಿ, ತನ್ನಲ್ಲಿದ್ದ ಹವಾಲ ಹಣವನ್ನು ದರೋಡೆ ಮಾಡಿಸುವ ನಾಟಕ ಮಾಡಿದ್ದ. ಈ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಪೊಲೀಸ್ ಆಯುಕ್ತರು ಹೇಳಿದರು. ಘಟನೆಯ ಬಳಿಕ ಸಲಾಂ ಹವಾಲ ಹಣದ ಪ್ರಮುಖ ಸೂತ್ರಧಾರಿ‌ಯ ಸೂಚನೆಯಂತೆ ದೂರು ದಾಖಲಿಸಿದ್ದಾನೆ. ಹವಾಲ ಹಣ ಕೈ ಬದಲಾಗಿರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ತನಿಖೆ ಚುರುಕುಗೊಳಿಸಿದಾಗ ಸಿಕ್ಕಿ ಬೀಳುವ ಭಯದಲ್ಲಿ ದೂರುದಾರ ಸಲಾಂ ಕುಟುಂಬ ಸಮೇತ ಪರಾರಿಯಾಗಿದ್ದ. ಸಲಾಂ ಮತ್ತು ಪ್ರಮುಖ ಸೂತ್ರಧಾರ ಸೇರಿದಂತೆ ಈ ಪ್ರಕರಣದಲ್ಲಿ ಇನ್ನೂ ಏಳೆಂಟು ಮಂದಿ ನಾಪತ್ತೆಯಾಗಿದ್ದು, ಅವರ ಶೋಧ ಕಾರ್ಯ ಪೊಲೀಸರು ನಡೆಸುತ್ತಿದ್ದಾರೆ. ಆರೋಪಿಗಳು ಈಗಾಗಲೇ ಕೋಟ್ಯಾಂತರ ರೂ. ಹವಾಲ ಹಣ ಸಾಗಾಟ ಮಾಡಿದ್ದಾರೆ. ಘಟನೆ ನಡೆದ ದಿನ ಅವರಲ್ಲಿ 16 ಲಕ್ಷ ರೂ. ಇತ್ತು. ಈ ಹಣ ಎಲ್ಲಿಂದ ಬಂದದ್ದು, ಯಾರಿಗೆ ತಲುಪಿಸಬೇಕಿತ್ತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

Related Posts

Leave a Comment