Home Kannada ಮೋಹನದಾಸರ ಕಟೀಲು ದುರ್ಗಾಪರಮೇಶ್ವರಿಯ ನೂತನ ಕಲಾಕೃತಿ ಲೋಕಾರ್ಪಣೆ

ಮೋಹನದಾಸರ ಕಟೀಲು ದುರ್ಗಾಪರಮೇಶ್ವರಿಯ ನೂತನ ಕಲಾಕೃತಿ ಲೋಕಾರ್ಪಣೆ

by akash

ಬರಹ: ಉಮೇಶ್. ಕೆ.ಅಂಚನ್. ಕಲಾವಿದರು ಸಮಯದ ಸದುಪಯೋಗ ಮಾಡುವಲ್ಲಿ ನಿಪುಣರೇ ಸರಿ. ಸಮಯ ಒಳ್ಳೆದಿರಲಿ ಕೆಟ್ಟದಿರಲಿ ಕಲಾವಿದ ತಾನು ಕಲಿತ ಕಲಿಯುತ್ತಿರುವ ಕಲೆಯ ಬಗ್ಗೆಯೇ ಯೋಚಿಸುತ್ತಿರುತ್ತಾನೆ. ಇದಕ್ಕೆ ಉದಾಹರಣೆ ಪುಷ್ಪ ಮಂಟಪ ಪ್ರವೀಣ ಮೋಹನದಾಸ್ ಸಪಲಿಗ. ವಿವಿಧ ಪೂಜೆಗಳಿಗೆ ತರತರದ ಪುಷ್ಪ ಮಂಟಪ, ಸಿಮೆಂಟು,ಕಲ್ಲು ,ಲೋಹ,ಮಣಿಗಳಿಂದ ದೇವರ ಮೂರ್ತಿ ಇಡುವ ಮಂಟಪ, ಹಾಗೂ “ಮಾತೃಭೂಮಿ ಕಾ ಅನ್ಮೋಲ್ ರತ್ನ” ಕಲಾಕೃತಿಯನ್ನು ರಚಿಸಿ ಕಳೆದ ಬಾರಿ ತನ್ನ ಮಿತ್ರ ಕುಂಚ ಕಲಾವಿದ ನವೀನ್ ಸುವರ್ಣರಿಂದ ತನಗೆ ಬೇಕಾದ ಹಾಗೆ ಹೊಸ ಶನೀಶ್ವರ ದೇವರ ಭಾವಚಿತ್ರವನ್ನು ರಚಿಸಿ ಲೋಕಾರ್ಪಣೆ ಮಾಡಿ ಇದೀಗ ಕೊರೋನ ಸಮಯದಲ್ಲಿ ಹೊಸ ಕೃತಿ ರಚನೆಯ ಸಾಹಸ ಮಾಡಿರುವುದು ಅಭಿನಂದನೀಯ. ಅಂದರೆ ಕೊರೊನ ಮಹಾಮಾರಿಯ ದೀರ್ಘ ಸಮಯವನ್ನು ಸದುಪಯೋಗ ಗೊಳಿಸಿ ತನ್ನ ಕನಸಿನ ಕೃತಿಯಾದ ಕಟೀಲು ದುರ್ಗಾ ಪರಮೇಶ್ವರಿ ಅಮ್ಮನವರ ಭಾವಚಿತ್ರವನ್ನು ಅರೆಮೂರ್ತಿ ರೂಪದಲ್ಲಿ ತನ್ನದೇ ಆದ ಶೈಲಿಯಲ್ಲಿ ಅಮ್ಮನವರ ರೂಪದಲ್ಲಿ ಯಾವುದೇ ಬದಲಾವಣೆ ಆಗದಂತೆ ಜಾಗರೂಕತೆ ವಹಿಸಿ ತಯಾರಿಸಿ ಅದಕ್ಕೆ ಬಲಿಷ್ಠ ಹಾಗೂ ಸುಂದರವಾದ ಚೌಕಟ್ಟನ್ನು ನಿರ್ಮಿಸಿ ಅಗಸ್ಟ್ 23ರಂದು ಕಟೀಲು ಶ್ರೀ ದುರ್ಗಾ ಪರಮೇಶ್ವರಿ ಮಂದಿರದಲ್ಲಿ ಹರಿನಾರಾಯಣ ಅಸ್ರಣ್ಣರ ಸಮ್ಮುಖದಲ್ಲಿ ಅಮ್ಮನವರ ಚರಣಕಮಲಕ್ಕೆ ಅರ್ಪಿಸಿದರು.
ಈ ಕಲಾಕೃತಿಯು ಸುಮಾರು 22 ಕಿಲೋ ಭಾರವಿದ್ದು 35 ಇಂಚು ಎತ್ತರ, 22 ಇಂಚು ಅಗಲ ಹಾಗೂ 6.5 ಇಂಚು ಆಳ ಹೊಂದಿದೆ. ಮೂರ್ತಿಯನ್ನು ಮಣ್ಣಿನಿಂದ ತಯಾರು ಮಾಡಿ ರಬ್ಬರಿನಿಂದ ಅಚ್ಚು ತೆಗೆದು ಉತ್ತಮ ಗುಣಮಟ್ಟದ ಫೈಬರಿನಿಂದ ತಯಾರಿಸಲಾಗಿದೆ.
ಅಮ್ಮನನ್ನು ಅತೀ ಸುಂದರವಾಗಿ ಕಾಣುವ ಉದ್ದೇಶ ಹಾಗೂ ಆಸೆಯಿಂದ ಸುಮಾರು 6500 ಕ್ಕೂ ಮಿಕ್ಕಿ ವಿವಿಧ ಬಣ್ಣಗಳ ವಿದೇಶಿ ಗಾಜಿನ ಮಣಿಗಳಿಂದ ಅಲಂಕರಿಸಲಾಗಿದೆ. ಚಿತ್ರಪಟದ ಮೇಲೆ ಎದ್ದು ಕಾಣುವ ಕಟೀಲು ಅಮ್ಮನನ್ನು ಸುಲಭವಾಗಿ ಗುರುತಿಸುವಂತಹ ಮುತ್ತಿನಂತ ಮಲ್ಲಿಗೆ ಹಾರವನ್ನು ಅರ್ಧ ಮುತ್ತು ಗಳಿಂದಲೇ ರಚಿಸಿ ನಡುವೆ ಬಾಳೇಹಗ್ಗದಿಂದ ಪೋಣಿಸಿದ ರೂಪ ಕೊಟ್ಟು ಹಾಕಲಾಗಿದೆ. ಮಾತೆಯ ಕೊರಳಿಗೆ ಆಭರಣ ಹಾಕುವಲ್ಲಿ ಕಂಠದ ಸುತ್ತ ಅದಕ್ಕೆ ಬೇಕಾದ ಅನುಕೂಲ ಇಟ್ಟೇ ಕಲಾಕೃತಿ ತಯಾರಾಗಿದೆ. ಕೃತಿಯ ಎದುರಿನ ಕೆಳಭಾಗದಲ್ಲಿ ಮಾತೆಯ ವಾಹನವೆಂಬಂತೆ ಕಂಚಿನ ಸಿಂಹದ ತಲೆಯನ್ನು ಅಳವಡಿಸಲಾಗಿದೆ. ಸುಂದರವಾಗಿ ಕಾಣಲು ಎಕ್ರೋಲಿಕ್ ಚಿನ್ನದ ಬಣ್ಣವನ್ನು ಉಪಯೋಗಿಸಲಾಗಿದೆ . ಇದಕ್ಕೆ ಬಣ್ಣದ ಬದಲು ಶುದ್ದ ಚಿನ್ನದ ಲೇಪನವನ್ನೂ ಬಳಸಿ ಇನ್ನೂ ಸುಂದರವಾಗಿ ಕಾಣುವಂತೆ ಮಾಡಲು ಸಾಧ್ಯ ಎಂದು ಮೋಹನದಾಸ್ ಹೇಳುತ್ತಾರೆ ಹಾಗೂ ಇಂತಹ ಕಲಾಕೃತಿಯೊಂದನ್ನು ಬೇಗನೆ ತಯಾರಿಸುವ ಆತುರದಲ್ಲಿದ್ದಾರೆ. ಚೌಕಟ್ಟಿನ ಬದಿಯಲ್ಲಿ ನಾಲ್ಕು ಸುತ್ತಲೂ ಬಣ್ಣ ಬಣ್ಣದ ವಿದ್ಯುತ್ ಬಲ್ಬುಗಳನ್ನು ಮತ್ತು ಶ್ರೀ ದೇವಿಯ ಶ್ಲೋಕ ನುಡಿಸುವ ಸಂಗೀತಮಯ ಧ್ವನಿಯಂತ್ರವನ್ನು ಅಳವಡಿಸಲಾಗಿದೆ. ಇವುಗಳು ಹಾಳಾದಲ್ಲಿ ರಿಪೇರಿ ಮಾಡಲು ಅಥವಾ ಬದಲಿಸಲು ಸುಲಭವಾಗಿ ತೆಗೆಯುವಂತೆ ಜಾಗ ಮಾಡಿಡಲಾಗಿದೆ. ಕಟೀಲು ಅಮ್ಮನವರ ಪರವಾಗಿ ಈ ಕೃತಿಯನ್ನು ಸ್ವೀಕರಿಸಿದ ಅಸ್ರಣ್ಣರು ಸಂತೋಷ ವ್ಯಕ್ತಪಡಿಸಿ ದೇವಸ್ಥಾನದ ಯಜ್ಞಶಾಲೆಯಲ್ಲಿ ಪ್ರತಿಷ್ಠಾಪನೆ ಮಾಡುವಂತೆ ತನ್ನ ಸಂಗಡಿಗರಿಗೆ ತಿಳಿಸಿ, ಪ್ರತಿಷ್ಠೆ ಮಾಡುವ ಜಾಗದಲ್ಲೇ ಕೃತಿಯನ್ನು ಇರಿಸಿ ಮುಂದೆ ಮಾತೆಯ ಈ ನಿಮ್ಮ ಕೃತಿಯ ಎದುರಿನಲ್ಲೇ ಯಜ್ಞಗಳು ನಡೆಯಲಿವೆ ಎಂದು ಹೇಳುತ್ತಾ ನಿಮ್ಮ ನೂತನ ಕಲಾಕೃತಿಯು ಪ್ರತೀ ಭಕ್ತರ ಪೂಜಾ ಸ್ಥಳಗಳಿಗೆ ತಲುಪಲಿ, ಪೂಜಿಸಲ್ಪಡಲಿ ಎಂದು ಶುಭ ಹಾರೈಸಿದರು. ಈ ಸಂಧರ್ಭದಲ್ಲಿ ಸೌಮ್ಯಾ ಮೋಹನದಾಸ್ ,ಮಂದಿರದ ಸದಸ್ಯರು, ಭಕ್ತರು ಉಪಸ್ಥಿತರಿದ್ದು ಮೋಹನದಾಸರಿಗೆ ಅಭಿನಂದಿಸಿದರು.ತನ್ನ ಆಸೆಯಂತೆ ನೂತನ ಕಲಾಕೃತಿಯು ಮಾತೆಯ ಚರಣಕಮಲದಲ್ಲಿ ಸ್ಥಾನ ಗಿಟ್ಟಿಸಿದನ್ನು ಕಂಡು ಮೋಹನದಾಸರು ಇದೊಂದು ಊಹಿಸಲಾರದ ಘಟನೆ ಹಾಗೂ ಕಲಾ ತಿರುಕನನ್ನು ಸಿಂಹಾಸನದಲ್ಲಿ ಕುಳ್ಳಿರಿಸಿದ ಅನುಭವವಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಕಲಾಕೃತಿಯನ್ನು ನೋಡಲಿಚ್ಚಿಸುವ, ವಿಷಯ ತಿಳಿಯಲಿಚ್ಚಿಸುವ ಅಥವಾ ಅಭಿನಂದಿಸಲಿರುವ ಕಟೀಲು ಅಮ್ಮನ ಭಕ್ತರು ಮೋಹನದಾಸರನ್ನು ಮೊಬೈಲ್ ನಂಬ್ರ 9820792124 ರಲ್ಲಿ ಸಂಪರ್ಕಿಸಬಹುದು.
ದೇವರ ವಿವಿಧ ಪೂಜೆಗಳಲ್ಲಿ ತರತರದ ಪುಷ್ಪ ಮಂಟಪಗಳನ್ನು ನೀಡಿ ಜನಮನಗೆದ್ದ ಮೋಹನದಾಸರಿಂದ ಇನ್ನಷ್ಟು ಹೊಸ ಕಲಾಕೃತಿಗಳು ಹೊರ ಬರಲಿ , ನೂತನ ಕೃತಿಯು ಭಕ್ತರಿಂದ ಅಪಾರ ಸಂಖ್ಯೆಯಲ್ಲಿ ಪೂಜಿಸಲ್ಪಡಲಿ ಎಂಬ ಶುಭಾಶೀರ್ವಾದದೊಂದಿಗೆ ನಾವೆಲ್ಲ ಅಭಿನಂದಿಸೋಣ.

Related Posts

Leave a Comment