ಮಂಗಳೂರು: ಲಂಚ ಸ್ವೀಕಾರದ ಆರೋಪದಲ್ಲಿ ಬಂಧಿತನಾಗಿರುವ ಆರೋಪಿಯ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ನಗರದ ತಾಲೂಕು ಕಚೇರಿಯ ಭೂ ದಾಖಲೆಗಳ ಸಹಾಯಕರ ಕಚೇರಿಯಲ್ಲಿ ಸರ್ವೆಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಗಂಗಾಧರ್ ಎಂಬಾತನ ಜಾಮೀನು ಅರ್ಜಿಯನ್ನು ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿಯವರು ವಜಾಗೊಳಿಸಿದ್ದಾರೆ. ಆರೋಪಿ ಗಂಗಾಧರ್ ಮರ ಕಡಿಯುವ ವಿಚಾರಕ್ಕೆ ಸಂಬಂಧಿಸಿದಂತೆ ಜಾಗವನ್ನು ಅಳತೆ ಮಾಡಿ ನಕಾಶೆ ನೀಡುವ ವಿಚಾರವಾಗಿ ಉಳ್ಳಾಲದ ಸೊಹೈಲ್ ಎಂಬುವರಿಂದ ಮೊದಲು ಲಂಚದ ರೂಪದಲ್ಲಿ 30 ಸಾವಿರ ರೂ. ಬೇಡಿಕೆ ಇಟ್ಟಿದ್ದನು. ಅಷ್ಟು ಹಣ ನೀಡಲು ಸಾಧ್ಯವಿಲ್ಲ ಎಂದು ಸೊಹೈಲ್ ಹೇಳಿದಾಗ 20 ಸಾವಿರ ರೂ. ನೀಡುವಂತೆ ಹೇಳಿದ್ದ. ಆ ಬಳಿಕ 3,500 ರೂ. ಮುಂಗಡ ಪಡೆದು, ಉಳಿದ ಹಣವನ್ನು ಫೆ.23ರಂದು ಸ್ವೀಕರಿಸುತ್ತಿದ್ದನು.
ಈ ವೇಳೆ, ಸದ್ರಿ ಸೊಹೈಲ್ರವರು ನೀಡಿದ್ದ ದೂರಿನ ಆಧಾರದಲ್ಲಿ ಮಂಗಳೂರಿನ ಭ್ರಷ್ಟಾಚಾರ ನಿಗ್ರಹದಳದ ಪೊಲೀಸ್ ಅಧೀಕ್ಷಕ ಬೋಪಯ್ಯ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಕೆ.ಸಿ ಪ್ರಕಾಶ್ ಮತ್ತು ಇನ್ಸ್ಪೆಕ್ಟರ್ ಶ್ಯಾಮ್ ಸುಂದರ್ ಹಾಗೂ ಗುರುರಾಜ್ ಅವರ ತಂಡ ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದರು. ಆರೋಪಿ ಗಂಗಾಧರ್ ಇದೀಗ ಮಂಗಳೂರಿನ ಕಾರಾಗೃಹದಲ್ಲಿ ನ್ಯಾಯಾಂಗ ಬಂಧನದಲ್ಲಿದ್ದು, ಜಾಮೀನಿಗೆ ಅರ್ಜಿ ಸಲ್ಲಿಸಿದ್ದನು. ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಮಂಗಳೂರಿನ ಮೂರನೇ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಬಿ. ಬಿ. ಜಕಾತಿಯವರು ಅಪರಾಧದ ಗಂಭೀರತೆಯನ್ನು ಪರಿಗಣಿಸಿ ವಜಾಗೊಳಿಸಿ ಆದೇಶಿಸಿದರು. ಮಂಗಳೂರಿನ ಭ್ರಷ್ಟಾಚಾರ ನಿಗ್ರಹ ದಳದ ಪರ ವಿಶೇಷ ಸರಕಾರಿ ಅಭಿಯೋಜಕ ಮತ್ತು ನ್ಯಾಯವಾದಿ ಕೆ. ಎಸ್. ಎನ್. ರಾಜೇಶ್ ವಾದಿಸಿದ್ದರು.