ಬೆಂಗಳೂರು: ನಗರ ಜಾಲಹಳ್ಳಿ ವಿಲೇಜ್ ಬಳಿ ಎದೆ ಝಲ್ ಅನ್ನಿಸುವ ಭೀಕರ ಅಪಘಾತ ಸಂಭವಿಸಿದ್ದು, ಸ್ಕೂಟಿಗೆ ಹಿಂದಿನಿಂದ ವೇಗವಾಗಿ ಬಂದ ಕಾರ್ ಗುದ್ದಿದ ಪರಿಣಾಮ ಯುವಕರಿಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ದಾರೆ. ಗೌತಮ್ ಮತ್ತು ಶ್ರೀಕಾಂತ್ ಮೃತ ಯುವಕರು. ಇಬ್ಬರು ಮಂಜುನಾಥ ನಗರದ ನಿವಾಸಿಗಳಾಗಿದ್ದು, ಫುಡ್ ಡೆಲವೆರಿ ಬಾಯ್ ಗಳಾಗಿ ಕೆಲಸ ಮಾಡಿಕೊಂಡಿದ್ದರು. ಮಂಗಳವಾರ ರಾತ್ರಿ 1.20ಕ್ಕೆ ಜಾಲಹಳ್ಳಿ ವಿಲೇಜ್ ರಸ್ತೆಯ ಅಪಾರ್ಟ್ಮೆಂಟ್ ತೆರಳಿ ಊಟ ನೀಡಿ ವಾಪಾಸ್ ಆಗ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಅಪಘಾತದ ತೀವ್ರತೆಗೆ ಯುವಕರಿಬ್ಬರು ಸ್ಥಳದಲ್ಲಿ ಸಾವನ್ನಪ್ಪಿದ್ರೆ, ಚಾಲಕ ಕಾರ್ ಸಮೇತ ಪರಾರಿಯಾಗಿದ್ದಾನೆ. ಈ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಾರ್ಟ್ಮೆಂಟ್ ಮುಂಭಾಗದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತದ ಭಯಾನಕ ದೃಶ್ಯ ಸೆರೆಯಾಗಿದೆ. ಗೌತಮ್ ಮತ್ತು ಶ್ರೀಕಾಂತ್ ಸ್ಕೂಟಿ ಹತ್ತಿ ಹೊರಡುವ ವೇಳೆ ಹಿಂದಿನಿಂದ ಬಂದ ಕಾರ್ ಡಿಕ್ಕಿ ಹೊಡೆದಿದೆ. ಕಾರ್ ಗುದ್ದಿದ ರಭಸಕ್ಕೆ ಇಬ್ಬರು ಸುಮಾರು ನೂರು ಮೀಟರ್ ಮುಂದೆ ಹೋಗಿ ಬಿದ್ದಿದ್ದಾರೆ. ಸ್ಕೂಟಿ ಸಂಪೂರ್ಣ ನಜ್ಜುಗುಜ್ಜಾಗಿದೆ.

