Home Kannada ಹೆತ್ತ ಮಗಳನ್ನೇ ಕೊಂದ ತಂದೆ, ತಾಯಿ, ದೊಡ್ಡಪ್ಪ – ಮರ್ಯಾದಾ ಹತ್ಯಾ ಪ್ರಕರಣ ಬಯಲು

ಹೆತ್ತ ಮಗಳನ್ನೇ ಕೊಂದ ತಂದೆ, ತಾಯಿ, ದೊಡ್ಡಪ್ಪ – ಮರ್ಯಾದಾ ಹತ್ಯಾ ಪ್ರಕರಣ ಬಯಲು

by akash

ಚಿಕ್ಕಬಳ್ಳಾಪುರ: ಹೆತ್ತ ತಂದೆ,ತಾಯಿ ಹಾಗೂ ದೊಡ್ಡಪ್ಪ ಸೇರಿ ಮಗಳನ್ನು ಕೊಲೆ ಮಾಡಿದ್ದು, ಪೊಲೀಸರ ತನಿಖೆಯಲ್ಲಿ ಮರ್ಯಾದಾ ಹತ್ಯಾ ಪ್ರಕರಣ ಬಯಲಾಗಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಹೆತ್ತ ತಂದೆ, ತಾಯಿ ಮತ್ತು ದೊಡ್ಡಪ್ಪನಿಂದಲೇ ಹತಳಾದ ದುರ್ದೈವಿಯ ಹೆಸರು ಪರ್ವಿನಾ ಬಾನು. ಆಕೆಯ ತಾಯಿ ಗುಲ್ಜಾರ್, ತಂದೆ ಫಯಾಜ್ ಹಾಗೂ ದೊಡ್ಡಪ್ಪ ಪ್ಯಾರೇಜಾನ್ ಕೊಲೆ ಮಾಡಿದವರು. ಈ ಮೂವರನ್ನು ಬಂಧಿಸಿರುವ ಗೌರಿಬಿದನೂರು ಗ್ರಾಮಾಂತರ ಪೊಲೀಸರು ವಿಚಾರಣೆ ಮುಂದುವರೆಸಿ ತನಿಖೆ ಕೈಗೊಂಡಿದ್ದಾರೆ. ಕೊಲೆ ಯಾಕೆ? ಫಯಾಜ್ ಹಾಗೂ ಗುಲ್ಜಾರ್ ಮಗಳಾದ ಪರ್ವಿನಾ ಬಾನುವಿಗೆ 10 ವರ್ಷಗಳ ಹಿಂದೆ ತಮ್ಮದೇ ಸಮುದಾಯದ ಯುವಕನ ಜೊತೆ ಮದುವೆ ಮಾಡಿದ್ದರು. ಆದರೆ ಮದುವೆ ಮೊದಲ ದಿನವೇ ಗಂಡನನ್ನು ತೊರೆದು ಬಂದ ಪರ್ವಿನಾ ಬಾನು ಅನ್ಯ ಧರ್ಮದ ಪ್ರಿಯಕರ ಮಣಿವಾಲ ಗ್ರಾಮದ ಶಿವಪ್ಪ ಎಂಬಾತನ ಜೊತೆ ಸಂಸಾರ ಸಾಗಿಸುತ್ತಿದ್ದಳು. ಶಿಲ್ಪಾ ಎಂದು ಮರುನಾಮಕರಣವನ್ನು ಸಹ ಮಾಡಿಕೊಂಡಿದ್ದರು. ಇವರಿಬ್ಬರ ಸುಖ ದಾಂಪತ್ಯ ಎಂಬಂತೆ ಗಂಡು ಮಗು ಸಹ ಆಗಿತ್ತು. ಆದರೆ ಅನಾರೋಗ್ಯದ ಕಾರಣ ಶಿವಪ್ಪ ತೀರಿಕೊಂಡ ನಂತರ ಮಣಿವಾಲ ತೊರೆದ ಪರ್ವಿನಾ ಬಾನು ಆಲಿಯಾಸ್ ಶಿಲ್ಪಾ ಮುಸಲ್ಮಾನರಹಳ್ಳಿಗೆ ಬಂದು ನೆಲೆಸಿದ್ದಳು. ಗಾರ್ಮೆಂಟ್ಸ್ ಕೆಲಸಕ್ಕೆ ಎಂದು ಹೋಗುತ್ತಿದ್ದ ಈಕೆ ವಾಟದಹೊಸಹಳ್ಳಿಯ ವಿನಯ್ ಜೊತೆ ಲಿವಿಂಗ್ ಟುಗೆದರ್ ರಿಲೇಶನ್ ಶಿಪ್ ಬೆಳೆಸಿಕೊಂಡಿದ್ದಳು. ಈ ವಿನಯ್ ಸಹ ಅಚಾನಾಕ್ಕಾಗಿ ಬೈಕ್ ಹಾಗೂ ಲಾರಿ ನಡುವೆ ನಡೆದ ಅಪಘಾತದಲ್ಲಿ ಮೃತಪಡುತ್ತಾನೆ. ಇದರಿಂದ ಈಕೆಯ ಜೊತೆ ಸಂಬಂಧ ಬೆಳೆಸಿದವರೆಲ್ಲಾ ಸಾಯುತ್ತಾರೆ ಎಂದು ಈಕೆಯ ಪರಿಚಯಸ್ಥರು ಎಲ್ಲರೂ ಮಾತನಾಡಿಕೊಂಡು ಅನುಮಾನಿಸಲು ಶುರು ಮಾಡಿದ್ರು. ಇದರಿಂದ ನೊಂದಿದ್ದ ಪರ್ವಿನಾ ಬಾನು ಸೆ.04 ರಂದು ತನ್ನ ತಂದೆ, ತಾಯಿ ಹಾಗೂ ದೊಡ್ಡಪ್ಪ ಕೆಲಸ ಮಾಡ್ತಿದ್ದ ಶ್ರೀನಿವಾಸಚಾರ್ಲಹಳ್ಳಿಯ ಮಾವಿನ ತೋಟಕ್ಕೆ ಹೋಗಿದ್ದಾಳೆ. ಈ ವೇಳೆ ತಾಯಿ ಗುಲ್ಜಾರ್ ಹಾಗೂ ದೊಡ್ಡಪ್ಪನಾದ ಪ್ಯಾರೇಜಾನ್ ಜೊತೆ ಅಕ್ರಮ ಸಂಬಂಧ ಹೊಂದಿರೋ ವಿಷಯ ತಿಳಿದುಕೊಂಡಿದ್ದಾಳೆ. ಈ ವೇಳೆ ಇವಳು ಇದ್ರೆ ನಮ್ಮ ಸಂಬಂಧಕ್ಕೂ ಅಡ್ಡಿ ಹಾಗೂ ಮೊದಲೇ ನಮ್ಮ ಸಮುದಾಯ ಬಿಟ್ಟು ಬೇರೆ ಸಮುದಾಯದವನ ಜೊತೆ ಹೋಗಿ ಈಗ ಬಂದಿದ್ದಾಳೆ ಎಂದು ಗಲಾಟೆ ಮಾಡಿ ಪರ್ವಿನಾ ಬಾನು ಧರಿಸಿದ್ದ ಜಾಕೆಟ್ ನ ದಾರದಿಂದಲೇ ಕುತ್ತಿಗೆ ಬಿಗಿದು ಆಕೆಯ ಕೊಲೆ ಮಾಡಿದ್ದಾರೆ. ಮೃತದೇಹವನ್ನ ಬಾವಿಯಲ್ಲಿ ಬಿಸಾಡಿದರು! ತದನಂತರ ಬಂದ ತಂದೆಗೂ ವಿಷಯ ತಿಳಿಸಿ ಮೂವರು ಸೇರಿ ಗಾಡಿಯಲ್ಲಿ ಮೃತದೇಹವನ್ನ ರಾತ್ರಿ ವೇಳೆ ತೆಗೆದುಕೊಂಡು ಹೋಗಿ ವಾಟದಹೊಸಹಳ್ಳಿ ಬಳಿಯ ಬಾವಿಯಲ್ಲಿ ಬಿಸಾಡಿದ್ದಾರೆ. ಇದು ಆತ್ಮಹತ್ಯೆ ಎಂದು ಬಿಂಬಿಸೋಕೆ ಬಾವಿಗೆ ಹೊಂದಿಕೊಂಡ ಕೊಂಬೆ ಕಟಾವು ಮಾಡಿ ಮೃತದೇಹದ ಮೇಲೆ ಬಿಸಾಡಿ ಬಂದಿದ್ದರು. ಯಾರಿಗೂ ಗೊತ್ತಾಗಲ್ಲ ಎಂದು ತಮ್ಮ ಪಾಡಿಗೆ ತಾವಿದ್ದರು. ಇನ್ನೂ ಸ್ಥಳೀಯರ ಮಾಹಿತಿ ಮೇರೆಗೆ ಸೆ.05 ರಂದು ಗೌರಿಬಿದನೂರು ಗ್ರಾಮಾಂತರ ಪೊಲೀಸರು ಬಾವಿಯಿಂದ ಮೃತದೇಹ ಹೊರತೆಗೆದು ಮರಣೋತ್ತರ ಪರೀಕ್ಷೆ ಮಾಡಿ ತಂದೆ ತಾಯಿಗೆ ಮೃತದೇಹ ತಗೊಂಡು ಹೋಗುವಂತೆ ಹೇಳಿದ್ರು. ಆದರೆ ಆಕೆಯ ಪೋಷಕರು ಮೃತದೇಹ ತೆಗೆದುಕೊಂಡು ಹೋಗಲಿಲ್ಲ. ಪೊಲೀಸರ ಅನಾಥ ಶವ ಎಂದು ಅಂತ್ಯಸಂಸ್ಕಾರ ಕಾರ್ಯ ನೇರವೇರಿಸಿದ್ದರು. ಪರ್ವಿನಾ ಬಾನು ಗಂಡ ಹಾಗೂ ಪ್ರಿಯಕರನ ಸಾವಿನಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಅಂದಾಜಿಸಿದ್ರು. ಇನ್ನೂ ಪರ್ವಿನಾ ವಾಸವಿದ್ದ ಮನೆಯಲ್ಲಿ ಐ ಮಿಸ್ ಯೂ ವಿಜೆ ನಾನು ನಿನ್ನ ಹತ್ರ ಬರ್ತೀದ್ದೀನಿ ಅನ್ನೋ ಬರಹ ಕೂಡ ಇತ್ತು. ಇದ್ರಿಂದ ಗಂಡ ಪ್ರಿಯಕರನ ಸಾವುಗಳಿಂದ ನೊಂದಿದ್ದ ಪರ್ವಿನಾ ಆತ್ಮಹತ್ಯೆ ಅಂತಲೇ ಎಲ್ಲರೂ ಅಂದುಕೊಂಡಿದ್ರು. ಆತ್ಮಹತ್ಯೆ ಎಂದೇ ಭಾವಿಸಿದ್ದ ಪೊಲೀಸರು! ; ಪರ್ವಿನಾ ಬಾನು ಬಾವಿಯಲ್ಲಿ ಬಿದ್ದ ಜಾಗ ಹಾಗೂ ಆಕೆಯ ಕುತ್ತಿಗೆ ಬಿಗಿದಿದ್ದ ಮಾರ್ಕ್ ಹಾಗೂ ಮರಕ್ಕೆ ನೇಣು ಹಾಕಿಕೊಂಡು ಮೃತಪಟ್ಟಿದ್ರೆ ಕೊಂಬೆ ಮುರಿದು ಬಾವಿಯಲ್ಲಿ ಬಿದ್ದಿರುವ ರೀತಿ ಅದು ಕಾಣಿಸುತ್ತಿರಲಿಲ್ಲ. ಕೊಂಬೆಯನ್ನ ಯಾರೂ ಮಚ್ಚಿನಲ್ಲಿ ಕಟಾವು ಮಾಡಿದ ಹಾಗೆ ಇತ್ತು. ಕಟಾವು ಮಾಡಿದ್ದು ಯಾರು? ಕುತ್ತಿಗೆಗೆ ಬಿಗಿದುಕೊಂಡಿದ್ರೆ ದಾರ ಎಲ್ಲಿ ಹೋಯ್ತು? ಎಂಬ ಅನುಮಾನಗಳು ಮೂಡಿ ಇದು ಆತ್ಮಹತ್ಯೆ ಅಲ್ಲ ಕೊಲೆ ಎಂಬ ಅನುಮಾನ ಸಿಪಿಐ ಶಶಿಧರ್ ಅವರಿಗೆ ಮೂಡಿತ್ತು. ಹೀಗಾಗಿ ಘಟನೆಯನ್ನು ಆಳವಾಗಿ ತನಿಖೆ ಕೈಗೊಂಡ ಪೊಲೀಸರಿಗೆ ತಂದೆ, ತಾಯಿ ಹಾಗೂ ಅಕೆಯ ದೊಡ್ಡಪ್ಪನೇ ಈ ಕೊಲಗಾರರು ಎಂದು ಗೊತ್ತಾಗಿದೆ. ಸದ್ಯ ಮೂವರು ಆರೋಪಿಗಳು ಪೊಲೀಸರ ಅತಿಥಿಗಳಾಗಿ ಜೈಲು ಸೇರುವಂತಾಗಿದೆ.

Related Posts

Leave a Comment

Translate »